ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿದ ವಿಶ್ವನಾಥ್ – ಮರಳಿ ಗೂಡು ಸೇರುತ್ತಾ ಹಳ್ಳಿಹಕ್ಕಿ?

72
firstsuddi

ನವದೆಹಲಿ/ಬೆಂಗಳೂರು : ಬಿಜೆಪಿಯಲ್ಲಿದ್ದರೂ ಯಾವಾಗಲೂ ಸ್ವಪಕ್ಷದ ವಿರುದ್ಧ ಕಿಡಿಕಾರುವ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಇದೀಗ ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಸೇರುವ ಲಕ್ಷಣಗಳು ಕಾಣುತ್ತಿವೆ. ದೆಹಲಿಯಲ್ಲಿ ವಿಶ್ವನಾಥ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರನ್ನು ಭೇಟಿ ಮಾಡಿದ್ದು , ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮೂರು ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಲು ಪ್ರಮುಖ ಪಾತ್ರವಹಿಸಿದ್ದರು. ಆದರೆ ಉಪಚುನಾವಣೆಯಲ್ಲಿ ಸೋತ ಬಳಿಕ ಅವರು ಬಿಜೆಪಿ ವಿರುದ್ಧ ಟೀಕಿಸಲಾರಂಭಿಸಿದರು.

ವಿರೋಧ ಪಕ್ಷದ ರೀತಿಯಲ್ಲಿ ಬಿಜೆಪಿ ಸರ್ಕಾರದ ನಡೆ ಹಾಗೂ ಸ್ವಪಕ್ಷದ ನಾಯಕರ ವಿರುದ್ಧವೇ ಟೀಕಿಸುತ್ತಲೇ ಇದ್ದಾರೆ. ಇದರಿಂದ ಬಿಜೆಪಿ ಸಹ ವಿಶ್ವನಾಥ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಈ ಹಿನ್ನೆಲೆಯಲ್ಲಿ ಹಳ್ಳಿ ಹಕ್ಕಿ ಇದೀಗ ಮತ್ತೆ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ ಎನ್ನಲಾಗಿದೆ.

ಎಚ್. ವಿಶ್ವನಾಥ್ ದಿಢೀರನೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಕೈಗೆ ಒಂದು ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ. ಇದು ಬರೀ ಶುಭ ಹಾರೈಕೆಯ ಭೇಟಿಯಲ್ಲ. ಇದರ ಹಿಂದೆ ಬೇರೆಯದ್ದೇ ರಾಜಕೀಯ ಲೆಕ್ಕಚಾರಗಳು ಅಡಗಿವೆ. ಏಕೆಂದರೆ ಎಚ್. ವಿಶ್ವನಾಥ್ ಇಡುವ ಪ್ರತಿ ಹೆಜ್ಜೆ, ಹಾಗೂ ಹೇಳುವ ಪ್ರತಿ ಮಾತಿನ ಹಿಂದೆ ರಾಜಕೀಯ ಗುಣಕಾರ ಇದ್ದೆ ಇರುತ್ತೆ. ಈ ದೃಷ್ಟಿಯಿಂದ ಭೇಟಿ ಮಹತ್ವ ಪಡೆದುಕೊಂಡಿದೆ.