ಯಾದಗಿರಿ : ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಕಲಬುರಗಿ ಆಕಾಶವಾಣಿ ಕೇಂದ್ರದ ಬಳಿ ರಾತ್ರಿ 12:30ರ ಸುಮಾರಿಗೆ ನಡೆದಿದೆ.
ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿಯತ್ತ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಯ ಮಧ್ಯೆ ಇರುವ ಗುಂಡಿಯಲ್ಲಿ ಕಾರು ಸಿಲುಕಿದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಬಿದ್ದಿದೆ. ಕಾರು ಬಿದ್ದ ರಭಸಕ್ಕೆ ಚಿಂಚನಸೂರ್ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ. ಸ್ಥಳೀಯರ ಸಹಕಾರದಿಂದ ಚಿಂಚನಸೂರ್ ಅವರನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರಿನಲ್ಲಿ ಇಬ್ಬರು ಚಾಲಕರು, ಓರ್ವ ಗನ್ ಮ್ಯಾನ್ ಇದ್ದರು ಎಂದು ತಿಳಿದು ಬಂದಿದ್ದು, ಇವರಿಗೆ ಯಾವುದೇ ಗಾಯಗಳಾಗಿಲ್ಲ. ಚಾಲಕ ನಿದ್ರೆಯ ಮಂಪರಿನಲ್ಲಿ ವಾಹನ ಚಲಾಯಿಸಿದ್ದಕ್ಕೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.










