ಮಾಜಿ ಸಚಿವ ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಶವ ಪತ್ತೆ…

65
firstsuddi

ಚಾಮರಾಜನಗರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರ ಶವ ಪತ್ತೆಯಾಗಿದೆ.

ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಬಳಿ ನಿರ್ಜನ ಪ್ರದೇಶದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಮಹದೇವಯ್ಯನವರ ಮೃತದೇಹ ಪತ್ತೆಯಾಗಿದೆ. ಬೆಡ್ಶೀಟ್ ಹೊದಿಸಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಮಹದೇವಯ್ಯ ಅವರನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಸ್ಥಳದಿಂದ 6 ಕಿಲೋ ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ಮೃತದೇಹವನ್ನು ಪತ್ತೆಹಚ್ಚಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ಮಹದೇವಯ್ಯ ಅವರು ಡಿಸೆಂಬರ್ 2 ರಂದು ಏಕಾಏಕಿ ನಾಪತ್ತೆಯಾಗಿದ್ದರು. ಇವರ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಡಿಸೆಂಬರ್ 3 ರಂದು ಮಹದೇವಯ್ಯ ಅವರ ಕಾರು ಹನೂರು ತಾಲೂಕಿನ ರಾಮಾಪುರದಲ್ಲಿ ಪತ್ತೆಯಾಗಿತ್ತು.

ಕಾರು ಪತ್ತೆಯಾದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ರಾಮನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದು, ಈ ವೇಳೆ ಕಾರಿನಲ್ಲಿ ರಕ್ತದ ಕಲೆ ಇರುವುದು ಪತ್ತೆಯಾಗಿತ್ತು. ಹೀಗಾಗಿ ಪೊಲೀಸರು ಶೋಧಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದ್ದರು.

ನಡೆದಿದ್ದೇನು..?: ಡಿಸೆಂಬರ್ 1ರ ಮಧ್ಯರಾತ್ರಿ ರಾಮನಗರ ಜಿಲ್ಲೆ ಚನ್ನಪಟ್ಟಣ ಹೊರವಲಯದಲ್ಲಿರುವ ತೋಟದ ಮನೆಗೆ ನುಗ್ಗಿದ್ದ ಮೂವರು ಅಪರಿಚಿತರು, ಮಹದೇವಯ್ಯ ಅವರಿಂದ ಲಾಕರ್ ತೆಗೆಸಿ ಹಣ, ದಾಖಲೆ ಕೊಂಡೊಯ್ದಿರುವ ಅನುಮಾನ ವ್ಯಕ್ತವಾಗಿತ್ತು. 

ಹಂತಕರು ಮಹದೇವಯ್ಯ ಅವರನ್ನು ಕಾರಿನಲ್ಲೇ ಕರೆದುಕೊಂಡು ಚನ್ನಪಟ್ಟಣದಿಂದ ಚಾಮರಾಜನಗರ ಜಿಲ್ಲೆಗೆ ಬಂದಿದ್ದು, ಬಳಿಕ ಕೊಳ್ಳೇಗಾಲದ ಬಳಿ ಹಂತಕರು ಡಾಬಾದಲ್ಲಿ ಪಾರ್ಟಿ ಮಾಡಿ ನಂತರ ಅದೇ ಮಾರ್ಗದ ಅಂಗಡಿಯಲ್ಲಿ ನೀರಿನ ಬಾಟ್ಲಿ ಖರೀದಿ ಮಾಡಿರುವ ಅನುಮಾನ ಹುಟ್ಟಿತ್ತು. ನಂತರ ಹನೂರು ತಾಲೂಕಿನ ನಾಲಾರೋಡ್​ ಬಳಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು.