ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಇಬ್ಬರು ತನಿಖಾಧಿಕಾರಿಗಳ ದಿಢೀರ್ ಬದಲಾವಣೆ…

51
firstsuddi

ಬೆಂಗಳೂರು: ಪುತ್ರನ ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಬಂಧನಕ್ಕೆ ಲೋಕಾಯುಕ್ತ ಮೂರು ವಿಶೇಷ ತಂಡಗಳನ್ನು ರಚಿಸಿದೆ. ಇನ್ನು ಈ ಪ್ರಕರಣದ ತನಿಖೆ ಶುರುವಾದ ನಾಲ್ಕೇ ದಿನಕ್ಕೆ ಇಬ್ಬರು ತನಿಖಾಧಿಕಾರಿಗಳನ್ನು ದಿಢೀರ್ ಬದಲಾವಣೆ ಮಾಡಲಾಗಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ.

ಪ್ರಕರಣ ದಾಖಲಾದಾಗಿನಿಂದ ತನಿಖೆ ಕೈಗೊಂಡಿದ್ದ ತನಿಖಾಧಿಕಾರಿಗಳಾದ ಡಿವೈಎಸ್‍ಪಿ ಪ್ರಮೋದ್ ಕುಮಾರ್, ಇನ್ಸ್ ಪೆಕ್ಟರ್ ಕುಮಾರಸ್ವಾಮಿಯವರನ್ನು ಬದಲಾವಣೆ ಮಾಡಲಾಗಿದೆ. ಇವರ ಬದಲಿಗೆ ಡಿವೈಎಸ್‍ಪಿ ಆಂಥೋನಿ ಜಾನ್, ಇನ್ಸ್ ಪೆಕ್ಟರ್ ಬಾಲಾಜಿ ಬಾಬು ಅವರನ್ನು ನೇಮಕ ಮಾಡಲಾಗಿದೆ.

ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಲಂಚಾವತಾರ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಾಡಾಳ್ ವಿರೂಪಕಾಕ್ಷಪ್ಪರಿಗೆ ಬಂಧನ ಭೀತಿ ಎದುರಾಗಿದೆ. ಲೋಕಾಯುಕ್ತ ಬಂಧನದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಮಾಡಾಳ್, ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಮಾಡಾಳ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.