ಚಿಕ್ಕಮಗಳೂರು : 2023 ವಿಧಾನಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೊನೆಯುಸಿರೆಳೆಯುತ್ತೇನೆ ಎಂದು ವರಿಷ್ಠ ಎಚ್.ಡಿ ದೇವೇಗೌಡ ಅವರು ಭಾವನಾತ್ಮಕವಾಗಿ ಹೇಳಿದ್ದಾರೆ. ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸುತ್ತೇನೆ ಎಂದು ನಾನು ಕನಸಿನಲ್ಲಿಯೂ ನೆನಸಿರಲಿಲ್ಲ. ಹೋರಾಟ ಮಾಡುವ ಶಕ್ತಿಯನ್ನು ನನಗೆ ರಾಜ್ಯದ ಜನತೆ ನೀಡಿದ್ದಾರೆ. ಅವರ ಮೇಲೆ ವಿಶ್ವಾಸವಿದೆ ಎಂದರು.
ಬೀರೂರು ಪಟ್ಟಣದ ತರಳಬಾಳು ಕಲ್ಯಾಣಮಂಟಪದಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಹಳ್ಳಿಯ ಹುರುಪಿನ ಹುರಿಯಾಳು ಗ್ರಾಮ ಪಂಜಾಯಿತಿ ಚುನಾವಣೆಯಲ್ಲಿ ವಿಜಯ ಸಾಧಿಸಿದ ಜೆಡಿಎಸ್ ಬೆಂಬಲಿತ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉಪಸಭಾಪತಿಗಳಾದ ದಿ.ಎಸ್.ಎಲ್.ಧರ್ಮೇಗೌಡರು ಈ ಕಾರ್ಯಕ್ರಮದಲ್ಲಿ ಇಲ್ಲ ಎಂಬುದನ್ನು ನೆನೆದು ದುಃಖವಾಗುತ್ತಿದೆ. ವಿಧಾನಪರಿಷತ್‍ನಲ್ಲಿ ನಡೆದ ಘಟನೆ ಸ್ವಾಭಿಮಾನಕ್ಕೆ ಧಕ್ಕೆ ಬಂದಿದ್ದರಿಂದ ಪ್ರಾಣ ಕಳೆದುಕೊಳ್ಳುವಂತಾಗಿದೆ. ನಮ್ಮ ಪಕ್ಷಕ್ಕೆ ಈ ದುರಂತ ನಷ್ಟವುಂಟುಮಾಡಿದೆ ಎಂದರು.
1972ರಿಂದಲೂ ಈ ಭಾಗದಲ್ಲಿ ಗಂಡೆದೆಯ ಹೋರಾಟಗಾರನಾಗಿದ್ದ ಎಸ್.ಆರ್. ಲಕ್ಷ್ಮಯ್ಯ ಅವರು ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಋಣವನ್ನು ತೀರಿಸಲು ಅವರ ಮಗನಿಗೆ ಮುಖ್ಯಮಂತ್ರಿಗಳಿಗೆ ಸರಿಸಮಾನವಾದ ವಿಧಾನಪರಿಷತ್ ಉಪಸಭಾಪತಿ ಸ್ಥಾನ ದೊರಕಿಸಿಕೊಡಲಾಗಿತ್ತು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ ಅವರು ಹೋರಾಟ ಮಾಡುವುದರ ಮೂಲಕ ಪಕ್ಷವನ್ನು ಸಂಘಟಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರ ಗೆಲುವು ಖಚಿತ ಎಂದರು.
ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸುವುದು ಉಳಿಸುವುದು ಬಹಳ ಕಷ್ಟ ಕಳೆದ 50 ವರ್ಷಗಳ ರಾಜಕೀಯ ಜೀವನದಲ್ಲಿ ಹೋರಾಟ ಮಾಡುತ್ತಾ ಬರಲಾಗಿದೆ. ಪ್ರಾದೇಶಿಕ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಅವರುಗಳು ಇದೇ ಪಕ್ಷದಲ್ಲಿ ಬೆಳೆದು ಮುಂದೆ ಬಂದಂತವರಾಗಿರುತ್ತಾರೆ . ಜೆಡಿಎಸ್ ಪಕ್ಷದ ಬಗ್ಗೆ ಕಠಿಣ ಶಬ್ದ ಬಳಸಿ ಮಾತನಾಡುತ್ತಿದ್ದಾರೆ. ಈ ಪಕ್ಷವನ್ನು ಉಳಿಸಲು ಬಹಳ ಕಷ್ಟ ಪಟ್ಟಿದ್ದೇನೆ.
ನಮ್ಮ ಪಕ್ಷದಲ್ಲಿ ಬೆಳೆದವರು ಕಾಂಗ್ರೆಸ್ ಬಿಜೆಪಿಯಲ್ಲೂ ಇದ್ದಾರೆ. 2023ರವರೆಗೆ ನಾನು ನಿಮ್ಮ ಜೊತೆ ಇರುತ್ತೇನೆ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿದೆ ಎಂದರು. ರಾಜ್ಯಸಭೆ ಸದಸ್ಯನಾಗಿ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕ್ಷೇತ್ರಗಳಿಗೆ ನನ್ನ ಅನುದಾನವನ್ನು ನೀಡಲಾಗುವುದು. ಕೇಂದ್ರ ಸರ್ಕಾರ ರಾಜ್ಯಸಭಾ ಸದಸ್ಯರಿಗೆ ಅನುದಾನ ನಿಗದಿಗೊಳಿಸಿರುತ್ತದೆ. ಇದರಲ್ಲಿ ಹೆಚ್ಚಿನ ಅನುದಾನವನ್ನು ಕಡೂರು ಕ್ಷೇತ್ರಕ್ಕೆ ನೀಡಲಾಗುವುದು.ಕಾರ್ಯಕರ್ತರ ಹೆಚ್ಚಿನ ಶ್ರಮದಿಂದ ಪಕ್ಷ ಗೆಲ್ಲಲು ಸಾಧ್ಯ. ಗೆದ್ದಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳು ನಮ್ಮ ಪಕ್ಷದ ಸೇನಾನಿಗಳು ಎಂದರು.
ಪ್ರಾಸ್ತವಿಕವಾಗಿ ಕ್ಷೇತ್ರದ ಮಾಜಿ ಶಾಸಕ ವೈ.ಎಸ್.ವಿ. ದತ್ತ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಇತರೆ ಅಭ್ಯರ್ಥಿಗಳ ಜೊತೆ ಭಾರಿ ಪೈಪೋಟಿ ಗೆಲುವು ಸಾಧಿಸಿದ್ದಾರೆ. 49 ಗ್ರಾಮ ಪಂಜಾಯಿತಿಗಳಲ್ಲಿ ಶೇ.50ರಷ್ಟು ಅಭ್ಯರ್ಥಿಗಳು7 ಗೆಲ್ಲುವ ನಿರೀಕ್ಷೆ ನಮ್ಮದಾಗಿತ್ತು. ಈಗ ಬಂದಿರುವ ನೂತನ ಸದಸ್ಯರುಗಳ ಸಂಖ್ಯೆ 185 ಇದೆ. ಕೆಲವರು ಕಾರ್ಯಕ್ರಮಕ್ಕೆ ಬಾರದೆ ಇದ್ದು, ಅವರುಗಳು ಸೇರಿದಂತೆ 200 ಸದಸ್ಯರುಗಳು ನಮ್ಮ ಪಕ್ಷದ ಬೆಂಬಲಿಗರಾಗಿರುತ್ತಾರೆ.
ಗ್ರಾ.ಪಂ ನೂತನ ಸದಸ್ಯರುಗಳು ದೊಡ್ಡ ಶಕ್ತಿಯಾಗಿರುತ್ತಾರೆ. ಇವರುಗಳ ಮಹತ್ವ ಹೆಚ್ಚಿನದ್ದಾಗಿದೆ. ಅಲ್ಲಿನ ಹುರಿಯಾಳುಗಳಾಗಿ ಕಾರ್ಯ ನಿರ್ವಹಿಸಲಿದ್ದು, ಅವರುಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ. ಇತರೆ ಪಕ್ಷದವರು ಸುಳ್ಳು ಮಾಹಿತಿ ನೀಡಿ ಹೇಳಿಕೆ ನೀಡಿರುವುದು ಅಪಹಸ್ಯವಾಗಿದೆ. ಗ್ರಾಮಗಳ ಅಭಿವೃದ್ಧಿ ಸಮಾಜ ಸೇವಕರಾಗಿ ನೂತನ ಸದಸ್ಯರುಗಳು ದುಡಿಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಾಮಾಜಿಕ ಹೋರಾಟಗಾರ್ತಿ ನಗ್ಮಾನಜೀರ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಚಂದ್ರಪ್ಪ ತಾಲ್ಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಎಂ.ರಾಜಪ್ಪ, ಪೇಮ್‍ಕುಮಾರ್, ಬಾವಿಮನೆ ಮಧು,ಮುಬಾರಕ್, ಮೋಹನ್ ಮತ್ತಿತರರಿದ್ದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಜೆಡಿಎಸ್ ಪಕ್ಷದ ಬೆಂಬಲಿತ ನೂತನ ಗ್ರಾ.ಪಂ. ಸದಸ್ಯರಿಗೆ ಮೈಸೂರು ಪೇಟ ತೊಡಿಸಿ ಶಾಲು, ಹಾರ ಹಾಗೂ ನೆನಪಿನ ಕಾಣಿಕೆಯನ್ನು ದೇವಗೌಡರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ವಿಜೇತರಾದ ಪಕ್ಷದ ಬೆಂಬಲಿತ ಸದಸ್ಯರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ನೀಡಿ ಪುರಸ್ಕರಿಸಲಾಯಿತು. ಸಮಾರಂಭಕ್ಕೆ ಆಗಮಿಸಿದವರು ಹೋಳಿಗೆ ಊಟ ಸವಿದರು.










