ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬ್ರೇಕ್ ಫೇಲ್ ಆದ ಪರಿಣಾಮ ಪಾದಚಾರಿಗಳಿಗೆ ಬಸ್ ವೊಂದು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 25 ಮಂದಿ ಗಂಭೀರವಾಗಿ ಗಾಯಗೊಂಡು, ನಾಲ್ವರು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ. ಕುರ್ಲಾದ ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಘಟನೆ ಸಂಬಂಧ ಬಸ್ ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಗಾಯಗೊಂಡ 25 ಮಂದಿಯನ್ನು ಸ್ಥಳೀಯ ಬಾಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿವೆ ಎಂದು ಹೇಳಿದ್ದಾರೆ. ನಾನು ನನ್ನ ಸ್ನೇಹಿತರೊಂದಿಗೆ ರಾಯಲ್ ಸ್ವೀಟ್ಸ್ ಅಂಗಡಿಯ ಮುಂದೆ ನಿಂತಿದ್ದಾಗ ವೇಗವಾಗಿ ಬಂದ ಬಸ್ ಏಕಾಏಕಿ ಹಲವು ವಾಹನಗಳಿಗೆ ಹಾಗೂ ಪಾದಚಾರಿಗಳಿಗ ಗುದ್ದಿತು. ಬಳಿಕ ಬುದ್ಧ ಕಾಲೋನಿಗೆ ಪ್ರವೇಶಿಸಿತು. ಕೂಡಲೇ ಸ್ಥಳಕ್ಕೆ ತೆರಳಿ ಬಸ್ ಚಾಲಕನನ್ನು ವಾಹನದಿಂದ ಹೊರಗೆ ತಂದೆವು. ಘಟನೆ ಬಳಿಕ ಹಲವರು ರಕ್ತಸಿಕ್ತರಾಗಿ ಕೆಳಗೆ ಬಿದ್ದಿದ್ದರು. ಸಾಕಷ್ಟು ಜನರು ಸ್ಥಳ ಸೇರಿದ್ದರು. ಬಳಿಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದವು ಎಂದು ಪ್ರತ್ಯಕ್ಷದರ್ಶಿ ಝೀಶನ್ ಅನ್ಸಾರಿ ಎಂಬುವವರು ಹೇಳಿದ್ದಾರೆ. ಮನೆಯಿಂದ ರೈಲ್ವೇ ನಿಲ್ದಾಣಕ್ಕೆ ಹೋಗುವಾಗ ಹಲವರು ಕೂಗಾಡುತ್ತಿದ್ದ ಶಬ್ದ ಕೇಳಿಸಿತು. ಸ್ಥಳಕ್ಕೆ ಹೋಗಿ ನೋಡಿದಾಗ ಬಸ್ ಪಾದಚಾರಿಗಳಿಗೆ, ಆಟೋರಿಕ್ಷಾ ಮತ್ತು ಮೂರು ಕಾರುಗಳು ಸೇರಿದಂತೆ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿರುವುದು ಕಂಡು ಬಂದಿತು. ನನ್ನ ಕಣ್ಣು ಮುಂದೆ ಕೆಲವು ಮೃತ ಪಟ್ಟಿದ್ದನ್ನು ನೋಡಿದೆವು. ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ ಭಾಭಾ ಆಸ್ಪತ್ರೆಗೆ ಕರೆದೊಯ್ದೆವು. ಮತ್ತೊಂದು ವಾಹನದಲ್ಲಿ ನನ್ನ ಸ್ನೇಹಿತರು ಗಾಯಗೊಂಡವರಿಗೆ ಸಹಾಯ ಮಾಡಿದರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಅಹ್ಮದ್ ಎಂಬುವವರು ಹೇಳಿದ್ದಾರೆ.










