ಮೂಡಿಗೆರೆ : ಕೊಡಗಿನ ದೈತ್ಯ ಮಳೆಗೆ ಇಡೀ ಕೊಡಗೇ ಕೊಚ್ಚಿ ಹೋಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಸಾವಿರಾರು ಜನ ಮನೆ-ತೋಟ-ಜಮೀನು ಕಳೆದುಕೊಂಡಿದ್ದಾರೆ. ಹಲವರು ಬದುಕನ್ನೇ ಕಳೆದುಕೊಂಡಿರೋದು ಮೂಡಿಗೆರೆಯ ಛತ್ರ ಮೈದಾನ ಗೆಳೆಯರ ಬಳಗದ ಯುವಕರ ನಿದ್ದೆಗೆಡಿಸಿದೆ. ಒಬ್ಬರ ಕಷ್ಟಕ್ಕೆ ಸ್ಪಂದಿಸೋದು ನಮ್ಮ ಇರುವಿಕೆಯನ್ನ ತೋರ್ಪಡಿಸುತ್ತದೆ. ಅವರು ನಮ್ಮ ಜೊತೆಯಲ್ಲಿಲ್ಲದಿದ್ರು ನಮ್ಮವರೆ. ನಮ್ಮಂತೆ. ಮನುಷ್ಯರೇ. ಅವರ ನೋವು, ಕಷ್ಟ ಕಣ್ಣಿಗೆ ಕಾಣದಿದ್ರು ಅರ್ಥೈಸಿಕೊಳ್ಳಲು ನಾವು ಶಕ್ತರು. ಮಡಿಕೇರಿಯೂ ಅಪ್ಪಟ ಮಲೆನಾಡು. ಮೂಡಿಗೆರೆಯೂ ಅಪ್ಪಟ ಮಲೆನಾಡು. ಇಂದು ಅವರಿಗಾದ ಸ್ಥಿತಿ ನಾಳೆ ನಮಗೂ ಬರಬಹುದು ಈ ಗೆಳೆಯರ ಬಳಗ ಮಡಿಕೇರಿ ಸಂತ್ರಸ್ಥರ ನೆರವಿಗೆ ನಿಂತಿದ್ದಾರೆ. ಭೀಕರ ನೆರೆಗೆ ಪ್ರವಾಹದಿಂದ ತತ್ತರಿಸುತ್ತಿರೋ ಮಡಿಕೇರಿ ಜನತೆಗೆ ಸಾರ್ವಜನಿಕರಿಂದ ವಿವಿಧ ರೀತಿಯ ಆಹಾರ ಸಾಮಾಗ್ರಿಗಳನ್ನ ಸಂಗ್ರಹಿಸಿ ನಿರಾಶ್ರಿತರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಗೆಳೆಯರ ಬಳಗದ ಕಾರ್ಯಕ್ಕೆ ಮೂಡಿಗೆರೆ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.