ಕೊಟ್ಟಿಗೆಹಾರ : ಸಮೀಪದ ಬಾಳೂರು ಹೊರಟ್ಟಿಯಲ್ಲಿ ಏರ್ ಟೆಲ್, ಜೀಯೊ ಹಾಗೂ ಬಿಎಸ್ ನೆಲ್ ನೆಟ್‍ವರ್ಕ್ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನೆಟ್‍ವರ್ಕ್ ಸಮಸ್ಯೆ ಉದ್ಬವಿಸಿದ್ದು ಗ್ರಾಮ ಪಂಚಾಯಿತಿ ಕಾರ್ಯಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಬಿ.ಮಂಜುನಾಥ್ ಹೇಳಿದರು.
ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಅನೇಕ ವರ್ಷಗಳಿಂದ ಬಾಳೂರು ಹೊರಟ್ಟಿ ಭಾಗದಲ್ಲಿ ಏರ್ ಟೆಲ್, , ಜೀಯೊ ಹಾಗೂ ಬಿಎಸ್ ನೆಲ್ ನೆಟ್‍ವರ್ಕ್ ಸಿಗುತ್ತಿತ್ತು. ಆದರೆ ಕಳೆದ ಹದಿನೈದು ದಿನಗಳಿಂದ ಮೊಬೈಲ್‍ಗೆ ಹಾಗೂ ಕಚೇರಿ ಕೆಲಸಗಳಿಗೆ ನೆಟ್‍ವರ್ಕ್ ಸಿಗದೇ ಪಂಚಾಯಿತಿಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪರದಾಡುವ ಸ್ಥಿತಿ ಉಂಟಾಗಿದೆ. ಅನೇಕ ವರ್ಷಗಳಿಂದ ಈ ಮೂರು ನೆಟ್‍ವರ್ಕ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ ಈ ಗ್ರಾಮಕ್ಕೆ ನೆಟ್‍ವರ್ಕ್ ಸಮಸ್ಯೆ ಉಂಟಾಗಿದೆ. ಗ್ರಾಮದ ಅನೇಕ ಯುವಕರು ವರ್ಕ್ ಪ್ರಮ್ ಹೋಂ ಕಾರ್ಯ ನಿರ್ವಹಿಸುತ್ತಿದ್ದು ನೆಟ್‍ವರ್ಕ್‍ಗಾಗಿ ತಮ್ಮ ಊರಿನಿಂದ 10 ಕಿ.ಮೀ ದೂರದ ಕೊಟ್ಟಿಗೆಹಾರ, ಮೂಡಿಗೆರೆಗೆ ಸಾಗಬೇಕಿದೆ. ಗ್ರಾಮ ಪಂಚಾಯಿತಿಯ ಪದಾಧಿಕಾರಿಗಳು ಮತ್ತು ಅದಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ಸಂವಹನದ ಕೊರತೆಯಿಂದ ಗ್ರಾಮದ ಅಭಿವೃದ್ದಿ ಕೆಲಸಗಳೂ ಆಗುತ್ತಿಲ್ಲ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಈ ಸಮಸ್ಯೆ ಪರಿಶೀಲಿಸಿ ಬಗೆಹರಿಸಬೇಕೆಂದು ಅವರು ಹೇಳಿಕೆಯಲ್ಲಿ ಕೋರಿದ್ದಾರೆ.










