ಕೊಟ್ಟಿಗೆಹಾರ : ಮಾಳಿಂಗನಾಡು ಸುತ್ತಮುತ್ತ ಭತ್ತದ ಬೆಳೆಗೆ ಕಟ್ಟೆ ರೋಗ ಕಾಣಿಸಿಕೊಂಡಿದ್ದು ಭತ್ತದ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
ಮಾಲಿಂಗನಾಡು ಭಾಗದಲ್ಲಿ ಸುಮಾರು 10 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಭತ್ತಕ್ಕೆ ಕಟ್ಟೆ ರೋಗ ಕಾಣಿಸಿಕೊಂಡಿದ್ದು ಇಂಟಾನ್ ಭತ್ತದ ತಳಿಗೆ ಹೆಚ್ಚಾಗಿ ಕಟ್ಟೆರೋಗ ಕಾಣಿಸಿಕೊಂಡಿದೆ.
ಬೂದು ಮತ್ತು ಕೆಂಪು ಕಟ್ಟೆರೋಗ ಹೆಚ್ಚಾಗಿದ್ದು ಭತ್ತದ ಎಲೆಗಳನ್ನು ನಿಧಾನಕ್ಕೆ ಹುಳ ತಿನ್ನಲು ತೊಡಗಿ ದಿನಗಳೆದಂತೆ ಇಡಿ ಭತ್ತದ ಗಿಡವೇ ರೋಗ ಪೀಡಿತವಾಗುತ್ತಿದೆ. ಈ ಭಾಗದಲ್ಲಿ ಅತಿಯಾದ ಮಳೆಯಿಂದಾಗಿ ಭತ್ತದ ಕೃಷಿಯಿಂದ ರೈತರು ವಿಮುಖರಾಗಿದ್ದು ಕೆಲ ರೈತರು ಮಾತ್ರ ಈ ವರ್ಷ ಭತ್ತದ ಗದ್ದೆಗಳಲ್ಲಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಆದರೆ ನಾಟಿ ಮಾಡಿದ ಭತ್ತದ ಗದ್ದೆಗಳಲ್ಲಿ ಕಟ್ಟೆರೋಗ ಕಾಣಿಸಿಕೊಂಡಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಅಧಿಕಾರಿ ಪುಟ್ಟಸ್ವಾಮಿ, ಕೆಂಪು ಮತ್ತು ಬಿಳಿ ರೋಗಗಳು ಭತ್ತಕ್ಕೆ ಬರುತ್ತದೆ. ರೋಗ ಲಕ್ಷಣಗಳನ್ನು ಗಮನಿಸಿ ನಿರ್ದಿಷ್ಟ ಔಷಧಿಗಳನ್ನು ಸಿಂಪಡಿಸಿ ರೋಗವನ್ನು ಹತೋಟಿಗೆ ತರಬಹುದು. ಕೃಷಿ ಇಲಾಖೆ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಲು ತಿಳಿಸಲಾಗುವುದು ಎಂದರು.
ಬಳಿಕ ಮಾತನಾಡಿದ ರೈತ ರಾಜು ಅವರು ರೈತರು ಭತ್ತದ ಕೃಷಿ ಮಾಡುವುದನ್ನೆ ಬಿಟ್ಟಿದ್ದಾರೆ. ಆದರೂ ಭತ್ತದ ಗದ್ದೆಯನು ಪಾಳು ಬಿಡಬಾರದು ಎಂಬ ಉದ್ದೇಶದಿಂದ ಭತ್ತ ಕೃಷಿ ಮಾಡಿದ್ದು ಈಗ ಭತ್ತಕ್ಕೆ ಕಟ್ಟೆರೋಗ ಬಂದಿದೆ. ಅತಿವೃಷ್ಟಿ, ಹೆಚ್ಚು ಖರ್ಚು ಮುಂತಾದ ಕಾರಣಗಳಿಂದ ಭತ್ತದ ಕೃಷಿಯಿಂದ ಹಿಂದೆ ಸರಿದ ರೈತರಿಗೆ ಕಟ್ಟೆರೋಗದಿಂದ ಆತಂಕ ಶುರುವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.










