ಮೂಡಿಗೆರೆ : ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕಿದೆ : ಮಗ್ಗಲಮಕ್ಕಿ ಗಣೇಶ್…

413
firstsuddi

ಬಣಕಲ್ : ಮಕ್ಕಳು ಸಹಜವಾಗಿ ಕಲಿಯುವಂತಹ ವಾತಾವರಣ ನಿರ್ಮಿಸುವ ಅಗತ್ಯವಿದ್ದು ಮಕ್ಕಳಿಗೆ ಕಲಿಕೆ ಒತ್ತಡ ಉಂಟುಮಾಡದ ರೀತಿಯಲ್ಲಿ ಬೋಧಿಸುವ ಅಗತ್ಯವಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಬಣಕಲ್‍ನ ಶ್ರೀವಿದ್ಯಾಭಾರತಿ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕಿದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಕ್ರಿಯಾತ್ಮಕವಾದ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಳ್ಳಲು ಪ್ರೇರೇಪಿಸಬೇಕಿದೆ. ಪೋಷಕರು ಮತ್ತು ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಬೇಕಿದೆ. ಪೋಷಕರು ಶಾಲೆಗೆ ಆಗಾಗ ಬೇಟಿ ನೀಡಿ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸಬೇಕಿದೆ ಎಂದರು.
ಶಾಲಾ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಮಾತನಾಡಿ ಶಾಲೆಯೂ ಮಕ್ಕಳಿಗೆ ಎರಡನೇ ಮನೆಯಿದ್ದಂತೆ. ಶಿಕ್ಷಣವನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳಿಗೆ ಕಲಿಸಲು ಹೊಸ ಹೊಸ ಕಲಿಕಾ ವಿಧಾನಗಳನ್ನು ಶಾಲೆಯಲ್ಲಿ ಅಳವಡಿಸಿಕೊಂಡು ಬೋಧಿಸಲಾಗುತ್ತಿದೆ ಎಂದರು.
ಮುಖ್ಯಶಿಕ್ಷಕಿ ಮಾಲತಿ ಟಿ.ಆರ್ ಮಾತನಾಡಿ ಶಿಕ್ಷಣದಿಂದ ಅತ್ಮಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿದ್ದು ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ದಿ ಸಾಧ್ಯ. ಪಠ್ಯ ಪುಸ್ತಕಗಳು ನಮಗೆ ಅವಶ್ಯಕವಾದ ಜ್ಞಾನ ನೀಡುತ್ತವೆ. ಪುಸ್ತಕದ ಜೊತೆಗೆ ಶಿಕ್ಷಕರು ಮಾಡುವ ಪಾಠದ ವಿಶ್ಲೇಷಣೆಯಿಂದ ಮಕ್ಕಳು ಶಾಲೆಯಲ್ಲಿ ಬರೀ ಪುಸ್ತಕದ ಹುಳುಗಳಾಗದೇ ಇತರ ಚಟುವಟಿಕೆಯಲ್ಲೂ ಭಾಗವಹಿಸಿ ಜ್ಞಾನವಂತರಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಸಮಿತಿ ಉಪಾಧ್ಯಕ್ಷ ಸುಬ್ಬರಾಯಗೌಡ, ಗೌರವ ಕಾರ್ಯದರ್ಶಿ ಲಿಂಗಪ್ಪ, ನಿರ್ದೇಶಕರಾದ ಉಷಾ ಪಿ ಶೆಟ್ಟಿಗಾರ್, ಖಜಾಂಚಿ ರಾಮಚಂದ್ರ ಹೊಳ್ಳ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ನಾಗರಾಜ್, ಶಿಕ್ಷಕರಾದ ವಸಂತ್ ಹಾರಗೋಡು, ಭಕ್ತೇಶ್, ಶೇಖರಪ್ಪ, ಲಿಂಗರಾಜು, ಮುಂತಾದವರು ಇದ್ದರು.