ಮೂಡಿಗೆರೆ : ಮರಳು ದಂಧೆಕೋರರಿಂದ ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನ…

948
firstsuddi

ಮೂಡಿಗೆರೆ : ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಲು ಮುಂದಾದಾಗ ಪೊಲೀಸರ ಮೇಲೆಯೇ ಮರಳು ದಂಧೆ ಕೋರರು ಲಾರಿ ಹತ್ತಿಸಲು ಯತ್ನಿಸಿರುವ ಘಟನೆ ತಾಲ್ಲೂಕಿನ ಬಾಳೂರು ಹೋಬಳಿಯ ತಗಲೂರು ವ್ಯಾಪ್ತಿಯಲ್ಲಿ ನಡೆದಿದೆ. ಹೇಮಾವತಿ ನದಿ ಒಡಲಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಮಾಹಿತಿಯನ್ನು ತಿಳಿದ ಪೊಲೀಸರು ಮರಳುಗಾರಿಕೆ ನಡೆಯುತ್ತಿದ್ದ ಜಾಗಕ್ಕೆ ತೆರಳಿದ್ದು, ಈ ವೇಳೆ ಮರಳುಗಾರಿಕೆ ಮಾಡುತ್ತಿದ್ದ ಮೊಹಿನುದ್ದೀನ್ ಎಂಬುವವರು ಪೊಲೀಸರ ಮೇಲೆಯೇ ಲಾರಿ ಹತ್ತಿಸಲು ಮುಂದಾಗಿದ್ದು, ಪೊಲೀಸರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಈ ಘಟನೆಯ ಬಳಿಕ ಆರೋಪಿ ಮೊಹಿದ್ದೀನ್ ನಾಪತ್ತೆಯಾಗಿದ್ದು, ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದ ಪೊಲೀಸರು ಓರ್ವ ಮರಳು ದಂಧೆಕೋರನನ್ನು ವಶಕ್ಕೆ ಪಡೆಯಲು ನಿನ್ನೆ ಐವರು ಸಬ್ ಇನ್ಸ್ ಪೆಕ್ಟರ್, ಐವರು ಸರ್ಕಲ್ ಇನ್ಸ್ ಪೆಕ್ಟರ್, ಒಂದು ನಕ್ಸಲ್ ನಿಗ್ರಹ ಪಡೆ ತುಕಡಿ, ಒಂದು ಓಬವ್ವ ತುಕಡಿ ಹಾಗೂ ಒಂದು ಸಶಸ್ತ್ರ ಮೀಸಲ ಪಡೆಯ ತುಕಡಿಯ ನೂರಕ್ಕೂ ಹೆಚ್ಚು ಮಂದಿ ಪೊಲೀಸರು ತಗಲೂರು ಗ್ರಾಮಕ್ಕೆ ನುಗ್ಗಿದ್ದಾರೆ. ಪೊಲೀಸರು ಗ್ರಾಮದ ಸುತ್ತಲೂ ನಾಕಾಬಂಧಿ ರಚಿಸಿ ದಂಧೆಕೋರನಿಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಹುಡುಕಾಟ ನಡೆಸಿದ್ದು, ಆದರೆ ಆರೋಪಿ ಎಲ್ಲಿದ್ದಾರೆ ಎಂಬ ಸುಳಿವು ಸಿಗದೇ ಆರೋಪಿಗೆ ಸೇರಿದ ಎರಡು ಬೈಕ್, ಎರಡು ಕಾರು ಹಾಗೂ ಎರಡು ಟೆಂಪೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.