ಕೊಟ್ಟಿಗೆಹಾರ : ಬಣಕಲ್ ಸುತ್ತಮುತ್ತ ಮಲಯಾಳಿ ಭಾಂದವರು ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ವಿಷು ಕಣಿ ವಿಷು ಹಬ್ಬದ ವಿಶೇಷವಾಗಿದ್ದು ದೇವರ ವಿಗ್ರಹದ ಮುಂದೆ ನವದಾನ್ಯಗಳು, ಕನ್ನಡಿ, ಬಟ್ಟೆಬರೆ, ಬಂಗಾರದ ಆಭರಣ, ಹಣ, ಫಲವಸ್ತುಗಳು ಇತ್ಯಾದಿ ವಸ್ತುಗಳನ್ನು ಇಡುವ ಸಂಪ್ರದಾಯವಿದ್ದು ಇದನ್ನು ವಿಷುಕಣಿ ಎನ್ನುತ್ತಾರೆ. ಮಲಯಾಳಿ ಭಾಂದವರು ವಿಷು ಕಣಿ ಕಂಡು ಪೂಜೆ ಸಲ್ಲಿಸಿದರು.
ವಿಷು ಹಬ್ಬದ ಸಂದರ್ಭದಲ್ಲಿ ಅರಳುವ ಹಳದಿ ಬಣ್ಣದ ಗೊಂಚಲು ಗೊಂಚಲಾಗಿರುವ ಕೊನ್ನ ಪೂ ಎಂಬ ಹೂವು ಈ ಹಬ್ಬದ ಪ್ರಧಾನ ಆಕರ್ಷಣೆಯಾಗಿದ್ದು ಕೊನ ಪೂವನ್ನು ಇಟ್ಟು ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಮಲಯಾಳಿ ಭಾಂದವರು ಸಾಂಪ್ರಾದಯಿಕ ಉಡುಗೆ ತೊಟ್ಟು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ವಿಷು ಹಬ್ಬದಲ್ಲಿ ಮನೆಯ ಹಿರಿಯರಿಂದ ಕಿರಿಯರು ಹಣವನ್ನು ಕಾಣಿಕೆಯಾಗಿ ಪಡೆಯುವ ಸಂಪ್ರದಾಯವಿದ್ದು ಇದನ್ನು ಕೈನೀಟ ಎನ್ನಲಾಗುತ್ತದೆ. ವಿಷು ಹಬ್ಬದ ಪ್ರಯುಕ್ತ ಸಿಹಿ ಅಡುಗೆಯನ್ನು ಮಾಡಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.










