ಮೂಡಿಗೆರೆ : ತಾಲೂಕಿನಲ್ಲಿ ಈ ಬಾರಿಯ ಮುಂಗಾರುಮಳೆ ಅಕ್ಟೋಬರ್ ತಿಂಗಳಲ್ಲೂ ಮುಂದುವರೆದಿದ್ದು, ಶೀತಭರಿತ ಮಳೆ ಆರ್ಭಟದಿಂದಾಗಿ ತಾಲೂಕಿನ ಕಾಫಿ ತೋಟಗಳಲ್ಲಿ ಕಾಫಿ, ಕಾಳುಮೆಣಸು, ಅಡಕೆ ಸೇರಿದಂತೆ ಇತರೇ ಬೆಳೆಗಳು ಸಂಪೂರ್ಣ ನಾಶವಾಗಿದೆ. ಮಲೆನಾಡಿನ ಕೃಷಿಕರು ಅಕ್ಷರಶಃ ಕಂಗಾಲಾಗಿದ್ದು, ಬೆಳೆ ಹಾನಿಯಾಗಿರುವ ಕಾಫಿ ತೋಟಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸಿ ಎಲ್ಲಾ ಬೆಳೆಗಾರರಿಗೂ ಬೆಳೆ ಪರಿಹಾರ ನೀಡಬೇಕೆಂದು ಬೆಳೆಗಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ಮತ್ತು ಜುಲೈ ತಿಂಗಳಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಾತ್ರ ಕಾಫಿ ಮಂಡಳಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಬೆಳೆ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್‍ನಲ್ಲಿ ಅತಿಯಾದ ಮಳೆಯಾಗಿದ್ದರಿಂದ ಇನ್ನೂ ಹೆಚ್ಚಿನ ಹಾನಿ ಸಂಭವಿಸಿದೆ. ಅಡಿಕೆ, ಕಾಳು ಮೆಣಸು, ಕಾಫಿ, ಬಾಳೆ ಸೇರಿದಂತೆ ರೈತರು ಬೆಳೆದ ಬೆಳೆ ಉದುರಿ, ಕೊಳೆತು ನೆಲಕಚ್ಚಿವೆ. ಇದನ್ನು ಕೂಡ ಸಮೀಕ್ಷೆ ನಡೆಸಿ, ಬೆಳೆ ಪರಿಹಾರ ಹಾಗೂ ಫಸಲ್ ಭೀಮಾ ಯೋಜನೆಯಲ್ಲಿಯೂ ಪರಿಹಾರ ಸಿಗುಂತೆ ಕ್ರಮ ಕೈಗೊಳ್ಳಬೇಕೆಂದು ಇತ್ತೀಚೆಗೆ ಕಾಫಿ ಮಂಡಳಿ ಕಾರ್ಯದರ್ಶಿ ಜಗದೀಶ್ ಅವರು ಚಿಕ್ಕಮಗಳೂರಿಗೆ ಭೇಟಿ ನೀಡಿದಾಗ ಅವರ ಗಮನಕ್ಕೆ ತರಲಾಗಿತ್ತು. ಆಗ ಅವರು ಕಾಫಿ ಮಂಡಳಿಯ ಅಧಿಕಾರಿಗಳಿಗೆ ಮರು ಸಮೀಕ್ಷೆ ನಡೆಸುವಂತೆ ಸ್ಥಳದಲ್ಲಿಯೇ ಸೂಚಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡ ಹೆಚ್ಚಿನ ಆಸಕ್ತಿ ತೋರಿ ರೈತರಿಗೆ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈಗ ಸಕಲೇಶಪುರದಿಂದ ಮೂಡಿಗೆರೆ ಪಟ್ಟಣದ ಸಮೀಪಕ್ಕೆ ಕಾಡಾನೆಗಳು ಪ್ರವೇಶಿಸಿವೆ. ಸಕಲೇಶಪುರದ ಅರಣ್ಯ ಅಧಿಕಾರಿಗಳು ಕಾಡಾನೆಗಳನ್ನು ಓಡಿಸಿದ್ದರಿಂದ ಅವುಗಳು ಮೂಡಿಗೆರೆಗೆ ಪ್ರವೇಶಿಸಿದೆ. ಹೀಗೆ ಕಾಡಾನೆಗಳನ್ನು ತಾಲೂಕಿನಿಂದ ತಾಲೂಕಿಗೆ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಓಡಿಸಿದರೆ ಎಲ್ಲಾ ಕಡೆಯೂ ರೈತರ ಜಮೀನು ಇರುವುದರಿಂದ ಕಾಡಾನೆಗಳು ಎತ್ತ ಹೋದರೂ ಕಾಫಿ ತೋಟ ಮತ್ತು ಭತ್ತದ ಗದ್ದೆಗಳೇ ಸಿಗುತ್ತದೆ. ಇದರಿಂದ ಎಲ್ಲಾ ಭಾಗದ ರೈತರಿಗೆ ತೊಂದರೆಯಾಗುತ್ತದೆ. ಕಾಡಾನೆಗಳನ್ನು ಓಡಿಸುವ ಬದಲು ಅವುಗಳನ್ನು ಹಿಡಿದು ಸಾಗಿಸಿದರೆ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಹಾಗಾಗಿ ಕಾಡಾನೆ ಹಿಡಿದು ಸಾಗಿಸಲು ಸರಕಾರ ತ್ವರಿತವಾಗಿ ಅರಣ್ಯ ಇಲಾಖೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಮಳೆಯಿಂದ ಹಾನಿಯಾಗಿರುವ ಬೆಳೆ ಮರುಸಮೀಕ್ಷೆ ನಡೆಸಿ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು: ಬಾಲಕೃಷ್ಣ.










