ಮೂಡಿಗೆರೆ : ಮುಗ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ನಿಮಿತ್ತ ಲಯನ್ಸ್ ಸಂಸ್ಥೆ ವತಿಯಿಂದ ಗಿಡಗಳನ್ನು ನೆಡಲಾಯಿತು. ಊರಿನ ಹಿರಿಯರಾದ ಸೋಮೇಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೆಳೆಗಾರರ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷರಾದ ಬಿದರಹಳ್ಳಿ ಜಯರಾಮ್ ಅವರು ಮಾತನಾಡಿ “ ಭೂಮಿ ಒಂದೇ, ಪರಿಸರವೂ ಒಂದೇ ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರ ಇದೆ. ಇರುವ ಒಂದೇ ಪರಿಸರವನ್ನು ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯ. ಮನುಷ್ಯ ಇದೇ ರೀತಿ ಪರಿಸರವನ್ನು ನಾಶ ಮಾಡುತ್ತಾ ಹೋದರೆ ಈಗಾಗಲೇ ಪ್ರಾಣಿಗಳು ಕಾಡಿನಿಂದ ಊರಿಗೆ ಬರುತ್ತಿದ್ದು, ಒಂದು ದಿನ ನಮ್ಮ ಭೂಮಿಯು ಮಂಗಳ ಗ್ರಹದಂತೆ ಬರಡಾಗುತ್ತದೆ. ಹೀಗಾಗಿ ನಾವು ಹಸಿರನ್ನು ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಲಯನ್ಸ್ ವಲಯ ಅಧ್ಯಕ್ಷರಾದ ಲೋಬೋ, ಲಯನ್ಸ್ ಸಂಸ್ಥೆಯ ವಲಯ-2 ಅಧ್ಯಕ್ಷರಾದ ಲಕ್ಷ್ಮಣ್ ಗೌಡ, ಕಾರ್ಯದರ್ಶಿ ಜಿ.ಪಿ. ಪ್ರಕಾಶ್, ದಶರಥ್, ಒಕ್ಕಲಿಗರ ಸಂಘದ ಸದಸ್ಯ ಪ್ರದೀಪ್ ಮುಗ್ರಹಳ್ಳಿ, ಹಳೇಕೋಟೆ ರಮೇಶ್ ಹಾಗೂ ಗ್ರಾಮಸ್ಥರಾದ ಮಂಜುನಾಥ್ ಗೌಡ, ಮಹೇಶ್, ದಿನೇಶ್ ಹಾಗೂ ಶಾಲಾ ಶಿಕ್ಷಕರು ಗ್ರಾಮಸ್ಥರು ಇದ್ದರು.










