ಮೂಡಿಗೆರೆ : ಲಾಕ್‍ಡೌನ್ ನಿಯಮ ಉಲ್ಲಂಘನೆಮಾಡಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿದ್ದ ಪಟ್ಟಣದ ನಾಲ್ಕು ಅಂಗಡಿಗಳಿಗೆ ಇಂದು ಮೂಡಿಗೆರೆ ಪೋಲೀಸರು ಬೀಗ ಜಡಿದು ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನೂರರ ಗಡಿಗೆ ಬಂದು ತಲುಪಿದ್ದು, ಸಾರ್ವಜನಿಕರು ಹಾಗೂ ಅಂಗಡಿಗಳ ಮೇಲೆ ತೀವ್ರ ನಿಗಾ ವಹಿಸಿರುವ ಪೋಲಿಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಮಿಂಚಿನ ಕಾರ್ಯಾಚರಣೆ ನಡೆಸಿ ಕಾನೂನು ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರವು ಜನತಾ ಕಫ್ರ್ಯೂ ವಿಧಿಸಿದ ನಂತರದಲ್ಲಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡುತ್ತಿರುವ ಸಾರ್ವಜನಿಕರು, ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಕಂಡು ಸಹಜವಾಗಿಯೇ ಹೌಹಾರಿದ್ದರು. ಇದರ ನಡುವೆ ಪಟ್ಟಣದ ಕೆಲವು ಅಂಗಡಿಗಳ ಮಾಲೀಕರು ನಷ್ಟದ ಕಾರಣವೊಡ್ಡಿ ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಹಲವು ದೂರುಗಳು ಸಹ ಕೇಳಿಬಂದಿದ್ದವು.
ಸಾಮಾಜಿಕ ಕಳಕಳಿಯ ಉದ್ದೇಶದಿಂದ ತಾಲ್ಲೂಕು ಆಡಳಿತ ಹಾಗೂ ಪೋಲಿಸ್ ಇಲಾಖೆ ಅಂಗಡಿ ಮಾಲೀಕರುಗಳ ಬಳಿ ಎಷ್ಟೇ ಮನವಿ ಮಾಡಿದರೂ ಜಗ್ಗದ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ. ಎಲ್ಲಾ ದಿನಗಳಂತೆ ಭಾನುವಾರದಂದು ಸಹ ವ್ಯಾಪಾರದ ಅವಧಿ ಮುಗಿದ ನಂತರದಲ್ಲಿ ಎಲ್ಲಾ ಅಂಗಡಿಗಳನ್ನು ಮುಚ್ಚಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಪೋಲೀಸರಿಗೂ ಹೆದರದ ಕೆಲವು ಅಂಗಡಿಯೊಳಗೆ ನುಗ್ಗಿದ ಪೋಲೀಸರು ನಾಲ್ಕು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿ, ಅಂಗಡಿಗಳನ್ನು ಸೀಲ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟಣದ ಆಂಪಲ್ ಸೂಪರ್ ಮಾರ್ಕೆಟ್, ಸದ್ಗುರು ಮೆಟಲ್‍ಸ್ಟೋರ್, ಕುಂದೂರು ಲಾಡ್ಜ್ ಬಳಿ ಇರುವ ಮಿ ಮೊಬೈಲ್ ಸ್ಟೋರ್ ಹಾಗೂ ಆಜಾದ್ ರಸ್ತೆಯ ಬಾಳೆಹಣ್ಣಿನ ಅಂಗಡಿಯನ್ನು ಸೀಲ್ ಮಾಡಿ ಪ್ರಕರಣ ದಾಖಲಿಸಲಾಗಿದೆ.
ಪೋಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ಮಾಸ್ಕ್ ಧಾರಣೆ ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಾರ್ವಜನಿಕರು ಹಾಗೂ ಅಂಗಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಮೂಡಿಗೆರೆ ತಹಶೀಲ್ದಾರ್ ಹೆಚ್.ಎಂ.ರಮೇಶ್, ಪೋಲೀಸ್‍ವೃತ್ತ ನಿರೀಕ್ಷಕ ಜಗದೀಶ್.ಹೆಚ್.ಎಂ, ಉಪ ನಿರೀಕ್ಷಕ ರವಿ, ತಿಮ್ಮಪ್ಪ,ಚೇತನ್, ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದರು.










