ಮೂಡಿಗೆರೆ : ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹತ್ತು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೇ ದೂರವಾಣಿ ನೆಟ್‍ವರ್ಕ್ ಸಮಸ್ಯೆ ಹಾಗೂ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಗ್ರಾಮಸ್ಥರು ಕಿತ್ತಲೆಗಂಡಿಯಲ್ಲಿರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ದಾರದಹಳ್ಳಿ, ಕೊಣಗೆರೆ, ಕೆಸವಳಲು, ಬಕ್ಕಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಕಳೆದ ಹತ್ತು ದಿನದಿಂದ ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲಿ ಜೀವನ ಕಳೆಯುವಂತಾಗಿದೆ ಹಾಗೂ ದಾರದಹಳ್ಳಿ ಫೀಡರ್ ನ ಸಹಾಯಕ ಇಂಜಿನಿಯರ್ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಕೆಂಪೇಗೌಡ ಒಕ್ಕಲಿಗರ ವೇದಿಕೆ ತಾಲೂಕು ಅಧ್ಯಕ್ಷ ಬ್ರಿಜೇಶ್ ಕಡಿದಾಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟಿಸಿ ಮಾತನಾಡಿದ ನಿಡುವಾಳೆ ಚಂದ್ರಣ್ಣ ಅವರು, ಮಲೆನಾಡಿನಲ್ಲಿ ಮಳೆ ಏನು ಹೊಸತ್ತೇನಲ್ಲ. ನಮ್ಮ ಭಾಗಕ್ಕೆ ಬೇಸಿಗೆಗಾಲದಲ್ಲೂ ಇದೇ ಸಮಸ್ಯೆ. ದಿನಕ್ಕೆ ನಾಲ್ಕು ಗಂಟೆ ವಿದ್ಯುತ್ ಇದ್ದರೆ ಅದೇ ಹೆಚ್ಚು. ಕಚೇರಿಗೆ ಕರೆ ಮಾಡಿದರೂ ಯಾರೂ ಸ್ಪಂದಿಸುವುದಿಲ್ಲ. ನಾವು ವಿದ್ಯುತ್ ಕಂಬ ಬಿದ್ದಿದ್ದಲ್ಲಿ ಟ್ರ್ಯಾಕ್ಟರ್ ಕೊಡುತ್ತೇವೆ ಹಾಗೂ ಗ್ರಾಮದ ಯುವಕರು ಲೈನ್‍ಮೆನ್‍ಗಳಿಗೆ ಹೆಗಲು ಕೊಡುತ್ತಾರೆ. ಆದರೂ ಕೂಡ ತಿಂಗಳುಗಟ್ಟಲೇ ವಿದ್ಯುತ್ ಇಲ್ಲದೆ ಜೀವನ ಮಾಡುವುದು ಎಷ್ಟು ಕಷ್ಟ ಎಂದು ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಅಧಿಕಾರಿಗಳು ಪಟ್ಟಣದಲ್ಲಿ ಕುಳಿತುಕೊಂಡಿರುತ್ತಾರೆ. ಅವರಿಗೆ ಎಲ್ಲಿ ಗೊತ್ತಾಗಬೇಕು ನಮ್ಮ ಕೃಷಿಕರ ಕಷ್ಟ. ಶೀಘ್ರದಲ್ಲಿ ವಿದ್ಯುತ್ ಸಮಸ್ಯೆ ಸರಿಪಡಿಸದಿದ್ದಲ್ಲಿ ಮೆಸ್ಕಾಂ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪರಿಹಾರಕ್ಕೆ ಯತ್ನ :
ಕಳೆದ ಹದಿನೈದು ದಿನಗಳಿಂದ ಧಾರಾಕಾರ ಮಳೆ ಆಗುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದುಹೋಗಿದ್ದು ಹಾಗೂ ಲೈನ್ ಮೇಲೆ ಮರಗಳು ಬಿದ್ದಿದ್ದು, ನಮಗೆ ಲೈನ್‍ಮೆನ್‍ಗಳ ಸಮಸ್ಯೆ ಇದ್ದು ಇದರಿಂದ ಸರಿಯಾದ ಸಮಯಕ್ಕೆ ವಿದ್ಯುತ್ ಕೊಡಲು ಸಾದ್ಯವಾಗಿಲ್ಲ. ಶೀಘ್ರವಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಕಾರ್ಯಪಾಲಕ ಅಭಿಯಂತರರು ಭರವಸೆ ನೀಡಿದ್ದಾರೆ.










