ಬಣಕಲ್ : ಮಲೆನಾಡಿನ ಜನಪದ ಸಂಸ್ಕೃತಿಯ ಸೊಗಡನ್ನು ಕಾಲ್ನಡಿಗೆ ಸಾಗಿ ಹಿರಿಯರಿಂದ ಮಾಹಿತಿ ಸಂಗ್ರಹಿಸಿ ‘ಸಾವಿರ ಸಾವಿರ ಶರಣು’ ಕೃತಿ ಒಂದೂವರೆ ದಶಕದ ಹಿಂದೆಯೇ ಹೊರತಂದು ಅನಾವರಣ ಗೊಳಿಸಿದ್ದೇನೆ ಎಂದು ಮೂಡಿಗೆರೆ ಉಪನ್ಯಾಸಕ, ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗ್ಗಿ ಆಚರಣೆಗಳು ಸಾಂಸ್ಕೃತಿಕವಾಗಿ ಮಾತ್ರವಲ್ಲದೆ, ಐತಿಹಾಸಿಕವಾಗಿಯೂ ಮಹತ್ವಪೂರ್ಣ ಆಗಿರುತ್ತವೆ. ಆದರೆ ಇವುಗಳನ್ನು ಪರಿಚಯಿಸುವ ಸಂಶೋಧನಾ ವಿವರಗಳ ಕೊರತೆ ಬಹಳಷ್ಟಿದೆ. ಈ ಕೊರತೆಯನ್ನು ನೀಗಿಸುವ ಹೊಸ ಪ್ರಯತ್ನದ ಫಲವಾಗಿ ಈ ಕೃತಿಯನ್ನು 2005ರಲ್ಲೆ ಹೊರ ತಂದಿದ್ದೇನೆ. ಇದು ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ವ್ಯಾಪ್ತಿಯ ಕೋಳೂರು, ತ್ರಿಪುರ, ಬಣಕಲ್ ಸಾವಿರಗಳಲ್ಲಿನ ಗ್ರಾಮಗಳನ್ನು ನಡಿಗೆಯ ಮೂಲಕ ಕ್ಷೇತ್ರಕಾರ್ಯ ಅಧ್ಯಯನ ಮಾಡಿ ಬರೆದಿರುವ ಮಹತ್ವದ ಸಂಶೋಧನಾ ಕೃತಿಯಾಗಿದೆ. ಇದಕ್ಕೆ ಈಗ ಹದಿನೈದು ವರ್ಷಗಳ ಇತಿಹಾಸದ ಸಂಭ್ರಮವಿದೆ
ಈ ಕೃತಿಯ ವಿಶೇಷವೆಂದರೆ, ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ನೂರಾರು ಕಿ.ಮೀ. ಬರೀ ಕಾಲ್ನಡಿಯಲ್ಲಿಯೇ ತಿರುಗಾಟ ನಡೆಸಿ ಮನೆಮನೆಗೆ ಭೇಟಿಕೊಟ್ಟು ಹಿರಿಯರಿಂದ ಮಾಹಿತಿಯನ್ನು ಸಂಗ್ರಹಿಸಿ ಜೊತೆಗೆ ಕೈಬರಹದ ದಾಖಲೆಗಳು, ದೇವಾಲಯದ ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಐತಿಹಾಸಿಕವಾಗಿ ಸಂಶೋಧನಾ ಶಿಸ್ತಿನಿಂದ ಅಧ್ಯಯನ ಮಾಡಿದ ಪ್ರತಿಫಲ ಎಂಬಂತೆ ಈಗ ಪ್ರಮುಖ ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿರುವ ದೇವರ ಮನೆ ಕಾಲ ಭೈರವೇಶ್ವರ ಹಾಗೂ ಫಲ್ಗುಣಿ ಕಲಾನಾಥೇಶ್ವರ ದೇವಾಲಯಗಳ ನಿಜವಾದ ಇತಿಹಾಸ ಬೆಳಕಿಗೆ ಬರಲು ಸಾಧ್ಯವಾಗಿದೆ. ಅದರಂತೆ ಹೊಯ್ಸಳರ ಕಾಲದ ವಿಶಿಷ್ಟ ಕಲ್ಲಿನ ರಚನೆಯ ದೇವಾಲಯಗಳಾದ ಇವುಗಳ ವ್ಯಾಪ್ತಿಯ ಆವರಣದಲ್ಲಿ ಸುಗ್ಗಿ ಉತ್ಸವಗಳು ಈಗಲೂ ನಡೆಯುತ್ತಿರುವುದಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ ಎಂಬುದಕ್ಕೆ ಇದು ಸಾಕ್ಷಿಗ್ರಂಥವೂ ಆಗಿದೆ. ಮಠದಹಳ್ಳಿ ಎಂಬ ಗ್ರಾಮದಲ್ಲಿ ಏಳೆಂಟು ಶತಮಾನಗಳ ಹಿಂದೆಯೇ ಐತಿಹಾಸಿಕ ಮಠವೊಂದು ಇತ್ತು ಎಂಬುವುದನ್ನೂ ಇದು ಪ್ರಕಟಗೊಳಿಸಿದೆ. ಹೀಗೆ ಇದು ಕನ್ನಡದ ಪ್ರಮುಖ ಐತಿಹಾಸಿಕ, ಶಾಸನಾಧರಿತ, ಜಾನಪದ, ಪೌರಾಣಿಕ ಅಂಶಗಳನ್ನು ಒಳಗೊಂಡ ಸಮಗ್ರ ಅಧ್ಯಯನ ಕೃತಿ ಎಂದರೆ ತಪ್ಪಾಗಲಾರದು. ಇದನ್ನು ನಾಡಿನ ಹಲವಾರು ಸಾಂಸ್ಕೃತಿಕ ಚಿಂತಕರು, ಪ್ರಮುಖ ಸಂಶೋಧಕರು ಪರಾಮರ್ಶನ ಗ್ರಂಥವನ್ನಾಗಿಯೂ ಕೂಡ ಬಳಸಿಕೊಂಡಿದ್ದಾರೆ ಎಂದರು.










