ಮುಂಬೈ : ಅತ್ತೆ-ಮಾವನ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ಮೂರು ತಿಂಗಳ ಹೆಣ್ಣು ಮಗುವನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನ ಕಲಾಚೌಕಿ ಪ್ರದೇಶದ ಸಂಘರ್ಷ ಸದನ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ತನ್ನ 3 ತಿಂಗಳ ಮಗುವನ್ನು ಯಾರೋ ಮಹಿಳೆ ಅಪಹರಿಸಿದ್ದಾರೆ ಎಂದು 36 ವರ್ಷದ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಆರೋಪಿ ತಾಯಿಯು ಅಪಹರಣ ಮಾಡಿದ್ದ ಮಹಿಳೆಯ ರೇಖಾಚಿತ್ರವನ್ನು ನೀಡಿ ಹೋಗಿದ್ದರು.
ಮಗುವಿನ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಹರಣ ನಡೆದ ಸ್ಥಳದಲ್ಲೇ ತಂಡಗಳನ್ನು ರಚಿಸಿ ತಪಾಸಣೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಆದರೆ, ಹೆಚ್ಚಿನ ವಿಚಾರಣೆ ವೇಳೆ ಆ ಮಹಿಳೆ ತನ್ನ ಮಗುವನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದು, ಮಗುವನ್ನು ಮನೆಯ ಮೇಲಿನ ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆ ಮಹಿಳೆ 2011ರಲ್ಲಿ ಮದುವೆಯಾಗಿದ್ದು, 2013ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಕಳೆದ ವರ್ಷ ಆಕೆ ಎರಡನೇ ಬಾರಿಗೆ ಗರ್ಭಿಣಿಯಾದಾಗ ಆಕೆಯ ಅತ್ತೆ ಮಾವಂದಿರು ಮಗುವಿನ ಲಿಂಗವನ್ನು ಪತ್ತೆ ಹಚ್ಚಲು ಮಾಟ-ಮಂತ್ರ ಮಾಡಿದ್ದರು. ಆಕೆಯ ಹೊಟ್ಟೆಯಲ್ಲಿ ಮತ್ತೆ ಹೆಣ್ಣು ಮಗುವೇ ಇದೆ ಎಂಬುದು ಗೊತ್ತಾಗುತ್ತಿದ್ದಂತೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿಂದೆಯೂ ಆಕೆಗೆ ಇದೇ ಕಾರಣಕ್ಕೆ ಗರ್ಭಪಾತ ಮಾಡಿಸಲಾಗಿತ್ತು. ಆದರೆ, ಈ ಬಾರಿ ಆಕೆ ಗರ್ಭಪಾತ ಮಾಡಿಸಿಕೊಳ್ಳದೆ ಮಗುವಿಗೆ ಜನ್ಮ ನೀಡಿದ್ದರು. ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಗಂಡನ ಮನೆಯವರ ಕಾಟ ತಾಳಲಾರದೆ ಆಕೆ 3 ತಿಂಗಳ ಹೆಣ್ಣು ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.










