ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ…

99
firstsuddi

ಗಾಂಧಿನಗರ: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ಇಂದು ಬೆಳಗ್ಗೆ ಸೂರತ್‌ನ ಪಾಲನ್‌ಪುರ್ ಜಕತ್ನಾಕ್ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆರು ಮಂದಿ ವಿಷಕಾರಿ ಪದಾರ್ಥ ಸೇವಿಸಿ ಸಾವನ್ನಪ್ಪಿದ್ದು, ಓರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಮೃತರನ್ನು ಮನೀಶ್ ಸೋಲಂಕಿ, ಅವರ ಪತ್ನಿ ರೀಟಾ, ಅವರ ತಂದೆ ಕಾನು, ಅವರ ತಾಯಿ ಶೋಭಾ ಮತ್ತು ಮೂವರು ಮಕ್ಕಳಾದ ದಿಶಾ, ಕಾವ್ಯ ಮತ್ತು ಕುಶಾಲ್ ಎಂದು ಗುರುತಿಸಲಾಗಿದೆ. ಮನೀಶ್ ಸೋಲಂಕಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮನೆಯಲ್ಲಿ ಆತ್ಮಹತ್ಯೆ ಕುರಿತಾದ ಪತ್ರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರದಲ್ಲಿ, ಸೋಲಂಕಿ ಕೆಲವು ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿದ್ದಾರೆ. ಆದರೆ, ಪೊಲೀಸರು ಇನ್ನೂ ನಿಖರವಾದ ವಿವರಗಳನ್ನು ಹಂಚಿಕೊಂಡಿಲ್ಲ.

ಸೋಲಂಕಿ ಪೀಠೋಪಕರಣ ವ್ಯಾಪಾರ ನಡೆಸುತ್ತಿದ್ದ. ಅವರೊಂದಿಗೆ ಸುಮಾರು 35 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಅವರ ಉದ್ಯೋಗಿಗಳು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕರೆ ಸ್ವೀಕರಿಸದೇ ಇರುವುದು ಮತ್ತು ಮನೆಯ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದು ಸ್ಥಳೀಯರು ಕಿಟಕಿಯನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಮೃತದೇಹಗಳು ಪತ್ತೆಯಾಗಿವೆ.