ಮೆಡಿಕಲ್ ಮಾಫಿಯಾದ ಕಪಿಮುಷ್ಠಿಯಲ್ಲಿ…

314
firstsuddi

ಡಾ. ಎಂ.ಎಸ್. ಮಣಿ

ಭಾಗ-2

`ವೈದ್ಯಕೀಯ ದೋಷ’ ಎಂಬುದು ನಿರ್ಲಕ್ಷ್ಯದಿಂದ ಉಂಟಾಗುತ್ತದೆ. ಇದನ್ನು ಸಿವಿಲ್ ಸ್ವರೂಪದ ನ್ಯಾಯಾಲಯದಲ್ಲಿ ದಾವೆ ಹೂಡಿ ಪ್ರಶ್ನಿಸಬಹುದು. ನಮ್ಮ ದೇಶದಲ್ಲಿ `ಗ್ರಾಹಕರ ನ್ಯಾಯಾಲಯ’ ವಿಚಾರಣೆಗೆ ಒಳಪಡಿಸುತ್ತವೆ. `ವೈದ್ಯಕೀಯ ನಿರ್ಲಕ್ಷ್ಯ’ ಅಪರಾಧ ಪ್ರಕರಣವನ್ನು ಹೊಂದಿರಬೇಕು. ಅವ್ಯವಹಾರ ಅಥವಾ ದುರಾಚಾರದಿಂದ ಕೂಡಿರಬೇಕು. ಹಾಗೆಯೇ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತಿರಬೇಕು. ಆದರೆ, ಇವು `ವೈದ್ಯಕೀಯ ದೋಷ’ಗಳನ್ನು ತಡೆಯಲು ಅಸಮರ್ಥ ಸಾಧನಗಳಾಗಿವೆ. ದೇಶದ ನ್ಯಾಯಲಯ ಎದುರಿಸುವ ಸಹಜ ಸಮಸ್ಯೆಯನ್ನು `ಗ್ರಾಹಕರ ನ್ಯಾಯಾಲಯ’ ಕೂಡ ಎದುರಿಸುತ್ತಿದೆ. ಅಂದರೆ, ದಾವಗಳ ಪ್ರಕ್ರಿಯೆಯಲ್ಲಿ ವಿಳಂಬತೆ, ಇತ್ಯರ್ಥಗೊಳ್ಳದೆ ಉಳಿದ ಪ್ರಕರಣಗಳು, ಸಿಬ್ಬಂದಿ ಕೊರತೆ, ಪರಿಹಾರ ಪಾವತಿಗಳಲ್ಲಿ ಏಕರೂಪತೆ ಇಲ್ಲದಿರುವುದು, `ವೈದ್ಯಕೀಯ ನಿರ್ಲಕ್ಷ್ಯ’ ಸಾಬೀತುಪಡಿಸಲು ಆಪಾದಿತನ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ತಜ್ಞರ ಅಭಿಪ್ರಾಯದೊಂದಿಗೆ ಸಲ್ಲಿಸಬೇಕಿದೆ.

ವೈದ್ಯರಿಗೆ ಅನಗತ್ಯ ತೊಂದರೆ ನೀಡುವುದರಿಂದ ರೋಗಿ ಮತ್ತು ವೈದ್ಯರ ಸಂಬಂಧವೂ ಅಪಾಯಕ್ಕೆ ಸಿಲುಕಿಬಿಡುತ್ತದೆ. ಹೀಗಾಗಿ ಆರೈಕೆಯ ಗುಣಮಟ್ಟದಲ್ಲಿ ಸುಧಾರಣೆಗಳನ್ನು ಹೆಚ್ಚಿಸಿದರೆ ವೃತ್ತಿಯ ಆದರ್ಶ ಉಳಿಯುತ್ತದೆ.

ಹೀಗಾಗಿ ದೇಶದ ಜನತೆಯ ಆರೋಗ್ಯವನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸಚಿವಾಲಯಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ವೈದ್ಯರು ತಮ್ಮ ಬಳಿ ನೋವು ತೋಡಿಕೊಳ್ಳಲು ಬರುವ ರೋಗಿಗಳಿಗೆ ಅನಾವಶ್ಯಕ, ದುಬಾರಿ, ವ್ಯರ್ಥವಾದ, ಅಪಾಯಕಾರಿ ಔಷಧಗಳನ್ನು ಬರೆದು ಕೊಡುತ್ತಿದ್ದಾರೆ. ಜೊತೆಗೆ ಅವಶ್ಯಕತೆಯೇ ಇಲ್ಲದ ಸ್ಕ್ಯಾನಿಂಗ್, ಮಲಮೂತ್ರ ಪರೀಕ್ಷೆಗಳನ್ನು ಮಾಡಿಸಲು ಸಲಹೆ ನೀಡುತ್ತಿದ್ದಾರೆ. ಇಂತಹದ್ದೊಂದು ದೂರು ಬೆಂಗಳೂರು ನಗರದಲ್ಲಿ ಮಾತ್ರವಲ್ಲ, ದೆಹಲಿ, ಮುಂಬೈ, ಹೈದರಾಬಾದ್ ಸೇರಿದಂತೆ ಇನ್ನಿತರೆ ನಗರಗಳು ಮಾತ್ರವಲ್ಲದೆ, ಜಗತ್ತಿನಾದ್ಯಂತ ಕೇಳಿಬರುತ್ತಿದೆ. ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾದಲ್ಲೂ ಕೂಡ ವರ್ಷಕ್ಕೆ 200 ಬಿಲಿಯನ್ ಮೊತ್ತವನ್ನು ಅನಾವಶ್ಯಕ ಮತ್ತು ಹೆಚ್ಚುವರಿ ಪರೀಕ್ಷೆಗಳಿಗಾಗಿ ವ್ಯಯಿಸಲಾಗುತ್ತಿದೆ. ಇಂತಹ `ಕಕ್ಕುಲಾತಿ’ ರೋಗಿಯನ್ನು ಅಪಾಯಕ್ಕೆ ದೂಡಿಬಿಡುತ್ತದೆ. ಪ್ರತಿ ವರ್ಷ ಶಸ್ತ್ರಚಿಕಿತ್ಸೆ, ಗಾಯ ಮತ್ತು ಹಾನಿಯಿಂದಾಗಿಯೇ 30 ಸಾವಿರ ಜನ ಅಸುನೀಗುತ್ತಿದ್ದಾರೆ. ಅಂದಾಜು ಒಂದರಂತೆ ಅಮೆರಿಕಾದಲ್ಲಿ ನಡೆಸಲಾಗುತ್ತಿರುವ `ವೈದ್ಯರ ಭೇಟಿ’, `ಆಸ್ಪತ್ರೆಗಳಲ್ಲಿ ತಂಗುವಿಕೆ’ಯಿಂದಾಗಿ ಎಲ್ಲಾ ಪ್ರಕರಣಗಳಲ್ಲಿಯೂ ರೋಗಿಯ ಆರೋಗ್ಯ ಸುಧಾರಣೆಯಾಗುತ್ತಿಲ್ಲ. ಬಹುತೇಕ ಪ್ರಕರಣಗಳಲ್ಲಿ `ಅಡ್ಡ ಪರಿಣಾಮ’ ಸಂಭವಿಸಿ ರೋಗಿಯು ಅಪಾಯಕ್ಕೆ ಸಿಲುಕುವುದೇ ಹೆಚ್ಚಾಗಿದೆ. ಇಂತಹ ಹೊಣೆಗೇಡಿತನದ ಪ್ರಕರಣಗಳು ನಮ್ಮ ದೇಶದಲ್ಲಿಯೇ ಹೆಚ್ಚು ಸಂಭವಿಸುತ್ತಿವೆ. ವ್ಯರ್ಥ ಹಾಗೂ ತಡೆಗಟ್ಟಬಹುದಾದ ಪ್ರಕರಣಗಳು ನಮ್ಮಲ್ಲಿ ಶೇಕಡ 70ರಷ್ಟಿವೆ. ಉದಾಹರಣೆಗೆ ರಾಯಚೂರಿನ ಲಿಂಗಸಗೂರಿನಲ್ಲಿ ಸುವರ್ಣಮ್ಮ ಗಂಗಪ್ಪ ಬಡಿಗೇರ ಎಂಬ ಮಹಿಳೆ, ಶಿವಪ್ಪ ಗಾಣಿಗೇರ ಎಂಬ ಆರ್‍ಎಂಪಿ ವೈದ್ಯನ ಬಳಿ ಹಲ್ಲು ನೋವಿಗೆಂದು ಚಿಕಿತ್ಸೆ ಪಡೆಯಲು ತೆರಳಿದ್ದರು. ಆಗವರು ನೀಡಿದ ಚುಚ್ಚುಮದ್ದಿನಿಂದ ಮಹಿಳೆಯ ಬಾಯಲ್ಲಿ ಬುರುಗು ಬಂದು ಪ್ರಜ್ಞೆತಪ್ಪಿ ಮೃತಪಟ್ಟರು. ಇದೇ ರೀತಿ ಆರೋಗ್ಯ ಸಚಿವರ ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿರುವ ವಿಮ್ಸ್ ನಲ್ಲಿ ಹೃದ್ರೋಗಿಯೊಬ್ಬರು ತಮ್ಮ ಮಗಳನ್ನು ಮತ್ತೊಂದು ವಾರ್ಡಿಗೆ ಬದಲಾಯಿಸಲು ಹೆಗಲು ಮೇಲೆ ಹೊತ್ತೊಯ್ದಿದ್ದಾರೆ. ಆಸ್ಪತ್ರೆಯ ವೈದ್ಯರು ಸಕಾಲದಲ್ಲಿ ಇವರಿಗೆ ವ್ಹೀಲ್ ಚೇರ್ ಕೂಡ ಒದಗಿಸಿಕೊಡದೆ ಉದಾಸೀನ ತೋರಿಸಿರುತ್ತಾರೆ.

ಹಾಗಾದರೆ, ನಮ್ಮಲ್ಲಿ ವೈದ್ಯರ ಕೊರತೆ ಇದೆಯೇ? ವೈದ್ಯಕೀಯ ಕ್ಷೇತ್ರ ಭ್ರಷ್ಟಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತದೆ. ಹೌದು ನಮ್ಮ ದೇಶದಲ್ಲಿ 2017ರ ಅಂಕಿ-ಅಂಶದಂತೆ 479 ವೈದ್ಯಕೀಯ ಕಾಲೇಜುಗಳಿವೆ. ಇವುಗಳಿಂದ ಪ್ರತಿ ವರ್ಷ 50 ಸಾವಿರ ಎಂಬಿಬಿಎಸ್ ಪದವಿ ಪಡೆದ ವೈದ್ಯರುಗಳು ಹೊರಬರುತ್ತಿದ್ದಾರೆ. ಭಾರತೀಯ ವೈದ್ಯ ಪರಿಷತ್ತಿನಲ್ಲಿ 9.3 ಲಕ್ಷ ಜನ ವೈದ್ಯರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 8 ಲಕ್ಷ ಜನ ಮಾತ್ರ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ವೈದ್ಯ-ರೋಗಿ ಅನುಪಾತ ಅತ್ಯಂತ ಕಡಿಮೆ ಇದೆ. ಇದು ಹೆಚ್ಚಾಗಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಕೂಡ ಹೇಳುತ್ತದೆ. ಇದರಂತೆ ಒಬ್ಬ ವೈದ್ಯನಿಗೆ 1 ಸಾವಿರ ರೋಗಿಗಳು ಇರಬೇಕೆಂದು ಬಯಸುತ್ತದೆ. ಆದರೆ, ನಮ್ಮಲ್ಲಿ ಒಬ್ಬ ವೈದ್ಯನಿಗೆ 1,650 ರೋಗಿಗಳಿದ್ದಾರೆ. ದೇಶದ ಜನಸಂಖ್ಯೆಯನ್ನು ಅವಲೋಕಿಸಿದಾಗ ನಗರ, ಪಟ್ಟಣ, ಗ್ರಾಮಗಳೆಂಬ ಅಂತರದಲ್ಲಿ ವ್ಯತ್ಯಾಸವಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರ ಸಂಖ್ಯೆ ಅತ್ಯಂತ ಕಡಿಮೆಯಾಗಿರುತ್ತದೆ. ಹೀಗಾಗಿ ನಮಗಿಂದು ವೈದ್ಯರುಗಳ ಸಂಖ್ಯೆ ಹೆಚ್ಚಾಗಬೇಕಿದೆ.

ವೈದ್ಯಕೀಯ ಶಿಕ್ಷಣ ಅಭ್ಯಸಿಸುವುದು ಕಠಿಣ ಮಾತ್ರವಲ್ಲ, ಬಹುಮುಖಿ ಕೂಡ ಆಗಿದೆ. ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಕೆಲಸ ಚಿಕಿತ್ಸೆ ನೀಡುವುದು ಮಾತ್ರವಲ್ಲ, ರೋಗಗಳನ್ನು ತಡೆಗಟ್ಟಲು ಕೂಡ ಮುಂದಾಗಬೇಕಿದೆ. ವೈದ್ಯಕೀಯ ಪಠ್ಯಕ್ರಮದಲ್ಲಿ `ರೋಗ ತಡೆಗಟ್ಟುವ’ ಮತ್ತು `ಸಾಮಾಜಿಕ ಔಷಧ’ ಕುರಿತಂತೆ ಬೋಧಿಸಲಾಗುತ್ತಿದೆ. ವಾಸ್ತವವಾಗಿ ವೈದ್ಯ ವಿದ್ಯಾರ್ಥಿಗಳು ರೋಗವನ್ನು ತಡೆಗಟ್ಟುವ, ಅಗತ್ಯವಿದ್ದರೆ ಸಂಭವಿಸುವ ಮತ್ತು ಗುಣಪಡಿಸುವ `ಪ್ರಾಥಮಿಕ ಕರ್ತವ್ಯ’ದ ಅರಿವನ್ನು ಹೊಂದಿರಬೇಕು. ಜೊತೆಗೆ ರೋಗಿಯನ್ನು ಅನುಕಂಪದಿಂದ ಮತ್ತು ಅನುಭೂತಿಯಿಂದ ಕಾಣುವಂತಾಗಬೇಕು. ತಾಳ್ಮೆಯಿಂದ ಅವರ ಸಮಸ್ಯೆಯನ್ನು ಆಲಿಸುವ ಮನೋಭಾವ ಬೆಳಸಿಕೊಳ್ಳಬೇಕು. ವೈದ್ಯರ ಮುಖದಲ್ಲಿ ಮೂಡುವ ಒಂದು ನಗುವಿನ ಗೆರೆ, ಆತ್ಮವಿಶ್ವಾಸದ ಮಾತು ರೋಗಿಯ ಪಾಲಿಗೆ ಚೈತನ್ಯ ಮೂಡಿಸುತ್ತದೆ. ರೋಗಿಯ ಜಾತಿ-ಧರ್ಮ, ಆರ್ಥಿಕ-ರಾಜಕೀಯ ಅಂತಸ್ತು, ಅಂಗ-ವರ್ಣವನ್ನು ಗಮನಿಸಿ ವೈದ್ಯೋಪಚಾರ ನೀಡುವುದನ್ನು ಮಾಡಬಾರದು. ವೈದ್ಯರು ವಿದ್ಯಾರ್ಥಿಯಾಗಿರುವಾಗಲೇ ಅವರ ಅಭ್ಯಾಸದ ವೇಳೆಯಲ್ಲಿ ಅವರನ್ನು ಸಮಾಜಮುಖಿಯನ್ನಾಗಿಸಬೇಕು. ಇದಕ್ಕೆ ಬೇಕಾದ ಪೂರಕ ಪರಿಸರ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಡಬೇಕಿದೆ. ಸಮಾಜವನ್ನು ಮೇಲೆತ್ತುವ ಕಾರ್ಯ ಇವರುಗಳಿಂದಲೇ ಆಗಬೇಕಿದೆ. ಕಾರಣ ನಮ್ಮ ಸಮಾಜ ವೈದ್ಯರಿಂದ ಸಾಕಷ್ಟು ನಿರೀಕ್ಷಿಸುತ್ತದೆ. ವಿಷಾದ ಎಂದರೆ, ವಿದ್ಯಾರ್ಥಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಕೂಡಲೇ ವಿದೇಶಕ್ಕೆ ಹಾರಿ ಬಂಡವಾಳಶಾಹಿಯಾಗುತ್ತಿದ್ದಾನೆ. ಅದರಲ್ಲೂ ಸ್ವದೇಶಿಯ ಮಂತ್ರ ಜಪಿಸುವ ದೇಶಭಕ್ತರು ಕೂಡ ತಮ್ಮ ಮಕ್ಕಳು ದೊಡ್ಡ ಗಂಟು ಮಾಡಿಕೊಂಡು ಬರಲೆಂದು ಸಾಲ ಮಾಡಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಪೋಷಕರಿರಲಿ, ಜ್ಞಾನದ ಕೇಂದ್ರವಾಗಿ ಸ್ವದೇಶೀಯರ ಸೇವೆ ಮಾಡಲು ಹೇಳಿಕೊಡಬೇಕಾದ ವೈದ್ಯಕೀಯ ಕಾಲೇಜುಗಳು ಮಾರುಕಟ್ಟೆಯ ಚೋರ್ ಬಜಾರಿನಂತೆ ಕಾರ್ಯನಿರ್ವಹಿಸುತ್ತಿವೆ.

ಭಾರತೀಯ ವೈದ್ಯಕೀಯ ಮಂಡಳಿ ವೈದ್ಯಕೀಯ ಶಿಕ್ಷಣ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ. ಟ್ರಾನ್ಸ್‍ಪರೆನ್ಸಿ ಇಂಟರ್‍ನ್ಯಾಷನಲ್ ಎಂಬ ಸಂಸ್ಥೆ ಸುಮಾರು 5 ಸಾವಿರ ಜನ ಭಾರತೀಯರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದೆ. ಇದರಂತೆ ಆರೋಗ್ಯ ಇಲಾಖೆಯಲ್ಲಿ ಅವ್ಯಾಹತವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ಪೊಲೀಸ್ ಇಲಾಖೆಯನ್ನು ಎರಡನೇ ಸ್ಥಾನಕ್ಕೆ ದೂಡಿದೆ. ರಾಯಿಟರ್ಸ್ ಸಂಸ್ಥೆ ಕೂಡ 2010ರಲ್ಲಿ ನಾಲ್ಕು ತಿಂಗಳ ಕಾಲ ಸಮೀಕ್ಷೆ ನಡೆಸಿತ್ತು. ಅದರಲ್ಲಿ ದೇಶದ 69 ಮೆಡಿಕಲ್ ಕಾಲೇಜುಗಳು ಅವ್ಯವಹಾರದಲ್ಲಿ ತೊಡಗಿವೆ. ನಿಯಮಾವಳಿಗಳನ್ನು ಉಲ್ಲಂಘಿಸಿ, ಗಮನಾರ್ಹ ವೈಫಲ್ಯವನ್ನು ಹೊಂದಿದೆ. ಪ್ರವೇಶ ಪರೀಕ್ಷೆಗಳಲ್ಲಿ ರಿಗ್ಗಿಂಗ್ ಕೂಡ ನಡೆಸಿವೆ. ವಿದ್ಯಾರ್ಥಿಗಳಿಂದ ಲಂಚವನ್ನು ಸ್ವೀಕರಿಸಿವೆ. ದೇಶದ 398 ಮೆಡಿಕಲ್ ಕಾಲೇಜುಗಳಲ್ಲಿ, ಪ್ರತಿ ಆರರಲ್ಲಿ ಒಂದು ಮೆಡಿಕಲ್ ಕಾಲೇಜು ಮೋಸದ ಆಪಾದನೆ ಹೊತ್ತಿದೆ. ಆದರೂ ಕೆಲವು ವೈದ್ಯರು ಮಾತ್ರವಲ್ಲ, ಡಾ|| ನಾಗೇಶ್ ಬಸವರಾಜ್, ಡಾ|| ರವಿ, ಡಾ|| ರಮೇಶ್, ಡಾ|| ಚಂದ್ರಶೇಖರ್, ಡಾ|| ಚಿಕ್ಕಬೈರಪ್ಪ, ಡಾ|| ಶಂಕರ್ ಕುಮಾರ್, ಡಾ|| ಲೀಲಾವತಿ, ಡಾ|| ವಿಜಯಲಕ್ಷ್ಮಿ, ಡಾ|| ಜಯಂತ್, ಡಾ|| ಸುವರ್ಣ ಪ್ರಭಾಕರ್, ಡಾ|| ಶಾಹೀದಾ, ಡಾ|| ಗಿರಿ, ಡಾ|| ಕಲೈವಾಣಿ, ಡಾ|| ಆಶಾ, ಡಾ|| ಅಂಜಲಿ, ಡಾ|| ಓವಿಯಾ ಅಂತಹವರು ತನ್ನ ರೋಗಿ ಗುಣಮುಖನಾಗಲಿ ಎಂದು ಬಯಸುತ್ತಾರೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ದುರಾಸೆ, ಲೋಭದಿಂದ ಕೂಡಿರುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮಲ್ಲಿ 20 ವೈದ್ಯಕೀಯ ಕಾಲೇಜುಗಳಿದ್ದವು. ಇದರಲ್ಲಿ 1 ಮಾತ್ರ ಖಾಸಗಿ ಕಾಲೇಜು ಆಗಿತ್ತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಚಿತ್ರಣವೇ ಬದಲಾಯಿತು. 1950ರ ಕೊನೆಯ ಹೊತ್ತಿಗೆ ಹೆಚ್ಚುವರಿಯಾಗಿ 7 ವೈದ್ಯ ಕಾಲೇಜುಗಳು ಆರಂಭಗೊಂಡವು. ನಂತರ 3 ದಶಕಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮಾತ್ರ ಹೆಚ್ಚಾದವುಯ 1980ರ ಕೊನೆಯ ಹೊತ್ತಿಗೆ 13 ಖಾಸಗಿ ವೈದ್ಯಕೀಯ ಕಾಲೇಜುಗಳು ಮಾತ್ರ ಇದ್ದವು. 99 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದವು. 1980ರ ನಂತರ ಖಾಸಗಿ ವೈದ್ಯ ಕಾಲೇಜುಗಳ ಸಂಖ್ಯೆ ಹೆಚ್ಚಾದವು. 2000ರಿಂದ 2017ರ ವರೆಗೆ 96 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಆರಂಭಗೊಂಡರೆ, 182 ಖಾಸಗಿ ವೈದ್ಯಕೀಯ ಕಾಲೇಜುಗಳು ಆರಂಭವಾಯಿತು. ಅಂದರೆ ವೈದ್ಯಕೀಯ ಕ್ಷೇತ್ರದಲ್ಲಿ ಖಾಸಗಿ ಪಾಲು ದ್ವಿಗುಣಗೊಂಡಿತು. ಪ್ರಧಾನಿ ಮೋದಿ ಅವರ ಆಡಳಿತದ 5 ವರ್ಷಗಳಲ್ಲಿ 90 ಸರ್ಕಾರಿ ವೈದ್ಯಕೀಯ ಕಾಲೇಜುಗಳು ತಲೆ ಎತ್ತಿವೆ. ಇದೀಗ ನಮ್ಮ ರಾಜ್ಯದಲ್ಲಿ 6 ಹೊಸ ವೈದ್ಯಕೀಯ ಕಾಲೇಜು ಮತ್ತು ಜಿಲ್ಲೆಗೊಂದು ನರ್ಸಿಂಗ್ ಕಾಲೇಜು ತೆರೆಯುವ ಚಿಂತನೆ ಇದೆ ಎಂದಿರುವ ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ನಿಲುವು ನಿಜಕ್ಕೂ ಶ್ಲಾಘನೀಯವಾದದ್ದು. ಇನ್ನು ಮಹಾರಾಷ್ಟ್ರ ಸರ್ಕಾರ `ಗ್ರಾಮೀಣ ಸೇವೆ ಕೋಟ’ ಎಂಬ ಹೊಸ ಮೀಸಲು `ಯೋಜನೆ’ಯನ್ನು ಜಾರಿಗೆ ತರುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ನೀಗಲಿದೆ. ಇದರಂತೆ ಎಂಬಿಬಿಎಸ್ ಪದವಿ ಪಡೆದವರು ಗ್ರಾಮೀಣ ಭಾಗದಲ್ಲಿ 5 ವರ್ಷ, ಸ್ನಾತಕೋತ್ತರ ಪದವಿ ಪಡೆದವರು ಗ್ರಾಮೀಣ ಭಾಗದಲ್ಲಿ 7 ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕಿದೆ.

ಇನ್ನು ಹೃದಯರೋಗ, ಧನುರ್ವಾಯು, ಮಧುಮೇಹ, ಶ್ವಾಸಕೋಶ ಸೋಂಕು ಸೇರಿದಂತೆ ಹಲವು ರೋಗರುಜಿನಗಳಿಂದ ಅನೇಕ ಜನ ಅವಧಿಪೂರ್ವ ಸಾವಿಗೀಡಾಗುತ್ತಿದ್ದಾರೆ. ಹೀಗೆ ಸಾವಿಗೀಡಾಗುವವರ ಸಂಖ್ಯೆ ಶೇಕಡ 70ರಷ್ಟಿದೆ. ಇದು ಸುಸ್ಥಿರ ಅಭಿವ್ಯಕ್ತಿ ತಲುಪಲು ತವಕಿಸುವ ದೇಶಗಳಿಗೆ ಬೆದರಿಕೆಯಂತಾಗಿದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕವಲ್ಲದ ರೋಗಗಳು ಅಂದರೆ ಎನ್‍ಸಿಡಿಯ ವರದಿ ತಿಳಿಸಿದೆ. ಈ ಕುರಿತಂತೆ ಜಾಗತಿಕವಾಗಿ ಜಾಗೃತಿಗೊಂಡು, ತ್ವರಿತವಾಗಿ ಕ್ರಮಕೈಗೊಳ್ಳಲು ಸಲಹೆ ನೀಡಿದೆ. ಸರ್ಕಾರ ತನ್ನ ಮೂಲಧ್ಯೇಯದಂತೆ ಜನರನ್ನು ಹೃದಯ ರಕ್ತನಾಳದ ಸಮಸ್ಯೆ, ಧನಿರ್ವಾಯು, ಮಧುಮೇಹ, ದೀರ್ಘಕಾಲದ ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರೆ ಸಾಂಕ್ರಾಮಿಕವಲ್ಲದ ರೋಗಗಳಿಂದ ಕಾಪಾಡಲು ಕಾರ್ಯ ಯೋಜನೆ ರೂಪಿಸಿಕೊಳ್ಳಬೇಕೀದೆ. 2030ರ ವೇಳೆಗೆ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವಿಗೀಡಾಗುವವರ ಪ್ರಮಾಣವನ್ನು ಶೇಕಡ 30ಕ್ಕೆ ಇಳಿಸಿಕೊಳ್ಳುವ ಕಾರ್ಯಸೂಚಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ ಸೇರ್ಪಡಿಸಿಕೊಂಡಿದೆ.

ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಸಾಧನವಾದ `ಲ್ಯಾನ್ಸೆಟ್’ನ ವರದಿಯಂತೆ 2030ರ ವೇಳೆಗೆ ಶೇಕಡ 70ರಿಂದ 80ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ರೋಗಗಳಿಂದ ಸಂಭವಿಸಲಿವೆ. ಹೀಗೆ ಸಾವಿಗೀಡಾದವರಲ್ಲಿ ಶೇಕಡ 80ರಷ್ಟು ಜನ ಕಡಿಮೆ ಶ್ರೀಮಂತಿಕೆ ಹೊಂದಿರುವ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ. ಇಂತಹವರಲ್ಲಿ ಅಂದಾಜು 16 ಮಿಲಿಯನ್‍ನಷ್ಟು ಜನ 70 ವರ್ಷದ ವಯೋಮಾನದವರಾಗಿದ್ದಾರೆ. ಸಾಂಕ್ರಾಮಿಕವಲ್ಲದ ರೋಗಗಳಿಗೆ ಒಳಗಾಗಿ ಸಾವಿಗೀಡಾಗುವವರು ಮುಂದಿನ 7 ವರ್ಷಗಳಲ್ಲಿ ಶೇಕಡ 17ರಷ್ಟು ಹೆಚ್ಚಾಗಲಿದ್ದಾರೆ. ಇದರಲ್ಲಿ ಆಫ್ರಿಕಾ ದೇಶದಲ್ಲಿ ಶೇಕಡ 27ರಷ್ಟು ಪೂರ್ವ ಮೆಡಿಟೇರಿಯನ್ ದೇಶಗಳಲ್ಲಿ ಶೇಕಡ 25ರಷ್ಟು, ಆಗ್ನೇಯ ಏಷ್ಯಾದಲ್ಲಿ ಇನ್ನೂ ಹೆಚ್ಚು ಕಂಡು ಬರಲಿದೆ.

ಮಧುಮೇಹದಿಂದ ಬಳಲುವವರು ಕಳೆದ 35 ವರ್ಷಗಳಲ್ಲಿ ನಾಲ್ಕು ಪಟ್ಟು ಹಾಚ್ಚಾಗಿದ್ದಾರೆ. 1908ರಲ್ಲಿ 108 ಮಿಲಿಯನ್ ಜನ ಮಧುಮೇಹದಿಂದ ಬಳಲುತ್ತಿದ್ದರು. 2015ರಲ್ಲಿ ಇವರ ಸಂಖ್ಯೆ 422 ಮಿಲಿಯನ್‍ಗೆ ಏರಿದೆ. ಅಂದರೆ 314 ಮಿಲಿಯನ್ ಸಂಖ್ಯೆ ಹೆಚ್ಚಾಗಿದೆ. ಪ್ರತಿ 11ರಲ್ಲಿ ಒಬ್ಬ ವಯಸ್ಕ ಮಧುಮೇಹದಿಂದ ಬಳಲುವವರಲ್ಲಿದ್ದಾರೆ. ಅಧಿಕ ರಕ್ತದ ಸಕ್ಕರೆ ಮಟ್ಟ ಪ್ರತಿ ವರ್ಷ 3.7 ಮಿಲಿಯನ್ ಜನರ ಪ್ರಾಣವನ್ನು ಹೀರುತ್ತಿದೆ. ಹಾಗೆಯೇ ಬ್ರೆಜಿಲ್, ಚೀನಾ, ಭಾರತ, ಮೆಕ್ಸಿಕೋ, ರಷ್ಯಾ, ದ. ಆಫ್ರಿಕಾ ಒಳಗೊಂಡ ಆರು ದೇಶಗಳ ಜನರ `ಅಧಿಕ ತೂಕ’ ಕುರಿತಂತೆ ಅಧ್ಯಯನ ನಡೆಸಲಾಗಿದೆ. ಅವರಲ್ಲಿ ನಮ್ಮ ದೇಶದಲ್ಲಿ ಕಳೆದೊಂದು ದಶಕಗಳಿಂದ ಶೇಕಡ 20ರಷ್ಟು ಜನ `ಅಧಿಕ ತೂಕ’ಕ್ಕೆ ಹೆಚ್ಚಾಗಿ ಈಡಾಗಿದ್ದಾರೆ. ಅದರಂತೆ 50 ಜನ ಪುರುಷರಲ್ಲಿ ಓರ್ವ `ಅಧಿಕ ತೂಕ’ ಹೊಂದಿದ್ದಾನೆ. 6 ಜನ ಮಹಿಳೆಯರಲ್ಲಿ ಒಬ್ಬಾಕೆ `ಅಧಿಕ ತೂಕ’ ಹೊಂದಿದ್ದಾಳೆ. ಹೀಗಾಗಿಯೇ ನಮ್ಮಲ್ಲಿ ಹೃದಯ ಸಂಬಂಧಿ ರೋಗಗಳು, ಧನುರ್ವಾಯು, ಮಧುಮೇಹ, ಶ್ವಾಸಕೋಶದ ಸಮಸ್ಯೆಗಳು ಹೆಚ್ಚಾಗಿವೆ. ಇವುಗಳಿಂದ 55ರಷ್ಟು ಜನ ಅವಧಿಪೂರ್ವ ಸಾವಿಗೀಡಾಗುತ್ತಿದ್ದಾರೆ. ಇವರಲ್ಲಿ 30ರಿಂದ 60 ವರ್ಷದವರೇ ಹೆಚ್ಚಾಗಿದ್ದಾರೆ. ಇದನ್ನು ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯಕ್ರಮ ರೂಪಿಸಿದೆ. ಇದರಂತೆ 2010ರಲ್ಲಿ 100 ಜಿಲ್ಲೆಗಳಲ್ಲಿ ಪರಿಚಯ ಮಾಡಲಾಗಿದೆ. 500 ಜಿಲ್ಲೆಗಳಿಗೆ ವಿಸ್ತರಿಸಬೇಕಿದೆ. ಈಗಾಗಲೇ 300 ಜಿಲ್ಲೆಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಾರಣೆಗೆ ಕ್ಲಿನಿಕ್‍ಗಳನ್ನು ಮಂಜೂರು ಮಾಡಲಾಗಿದೆ. 85 ಹೃದಯ ರೋಗಗಳನ್ನು ಗುಣಪಡಿಸುವ ಕ್ಲಿನಿಕ್‍ಗಳನ್ನು ದೇಶಾದ್ಯಂತ ಆರಂಭಿಸಲಾಗಿದೆ. 2025ರ ವೇಳೆಗೆ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವಿಗೀಡಾಗುವವರ ಪ್ರಮಾಣವನ್ನು ಶೇಕಡ 25ರಷ್ಟನ್ನು ತಡೆಗಟ್ಟಲು ಗುರಿ ಮತ್ತು ಸೂಚಕಗಳನ್ನು ಹಾಕಿಕೊಂಡಿರುವ ಮೊದಲ ದೇಶ ನಮ್ಮದಾಗಿದೆ. ವಿಡಂಬನೆ ಎಂದರೆ, ಕರೋನಾ ಶಂಕಿತರು ತಂಗಿರುವ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ, ಶಂಕಿತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಸ್ನಾನದ ಬಕೆಟ್, ಸೋಪು ಸೇರಿದಂತೆ ಪ್ರತ್ಯೇಕ ಸಾಮಗ್ರಿಗಳನ್ನು ನೀಡಲಾಗುತ್ತಿಲ್ಲ. ಪ್ರತ್ಯೇಕ ವಾರ್ಡ್ ವ್ಯವಸ್ಥೆ ನೀಡಲು ಸಾಧ್ಯವಿಲ್ಲ. ಪ್ರತ್ಯೇಕ ವಾರ್ಡ್ ವ್ಯವಸ್ಥೆ ಬಯಸಿರುವ ಶಂಕಿತ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ|| ನಾಗರಾಜ್ ಹೇಳಿದ್ದಾರೆ.

ನಮ್ಮ ದೇಶದಲ್ಲಿ `ವೈದ್ಯಕೀಯ ದೋಷ’ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. ಇದು ನಮ್ಮ ದೇಶದೊಳಗಿನ ವ್ಯಾಪಕ ಮತ್ತು ಆಳವಾದ ಸಮಸ್ಯೆಗಳನ್ನು ಅಭಿವ್ಯಕ್ತಿಗೊಳಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯ ಚಿತ್ರಣ ನಮ್ಮಲ್ಲಿನ ವೈದ್ಯಕೀಯ ದೋಷಗಳ ಬಗ್ಗೆ ಅರಿಯಲು ಮತ್ತು ಸರಿಪಡಿಸಿಕೊಳ್ಳಲು ಅವಕಾಶ ಒದಗಿಸಿಕೊಟ್ಟಿದೆ. ಬಗೆಹರಿಯದೆ, ದಾರಿಕಾಣದೆ ಉಳಿದಿದ್ದ ಹಲವಾರು ಪ್ರಶ್ನೆಗಳಿಗೆ ಮಾರ್ಗವನ್ನು ತೋರಿದೆ. ಅದರಲ್ಲೂ ಆರೋಗ್ಯ ಸುರಕ್ಷಾ ವ್ಯವಸ್ಥೆಯ ನಿಯತ್ರಣ ಮತ್ತು ನಿಧಿ ಒದಗಿಸುವ ಅನಿವಾರ್ಯತೆ ಕುರಿತು ಕಣ್ತೆರೆಸಿದೆ. ಆರೋಗ್ಯ ಹದೆಗೆಡಿಸುವ ಉತ್ಪನ್ನಗಳಾದ ಸಕ್ಕರೆ ಸಿಹಿಯ ಪಾನೀಯ, ಪ್ಲಾಸ್ಟಿಕ್ ಪೊಟ್ಟಣದಲ್ಲಿ ಕಟ್ಟಿರುವ ಆಹಾರ, ಅಧಿಕ ಪ್ರಮಾಣದ ಸಕ್ಕರೆ, ಉಪ್ಪು, ಕೊಬ್ಬುಮಿಶ್ರಿತ ಆಹಾರಗಳ ವ್ಯಾಪಾರವನ್ನು ನಿಯಮಾವಳಿಯಡಿ ತರಬೇಕೆಂದು ವಿಶ್ವಸಂಸ್ಥೆ ಹೇಳಿದೆ.

ಇಂದು ರೋಗ `ತಡೆಗಟ್ಟುವಿಕೆಯು, ಗುಣಪಡಿಸುವುದಕ್ಕಿಂತ ಉತ್ತಮ’ ಎಂಬ ನಾಣ್ಣುಡಿಯಂತೆ ನಡೆಯಬೇಕಿದೆ. ಇದಕ್ಕಾಗಿ ನಾಲ್ಕು ವಿಚಾರಗಳನ್ನು ಅತ್ಯಂತ ಗಹನವಾಗಿ ಗಮನಿಸಬೇಕಿದೆ. ಮೊದಲನೆಯದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ಒದಗಿಸಬೇಕಿದೆ. ಎರಡನೆಯದಾಗಿ ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಾದ ನಿಯಂತ್ರಣವನ್ನು ಹೇರಿ ಅಂಕುಶದಲ್ಲಿಟ್ಟುಕೊಳ್ಳಬೇಕಿದೆ. ಮೂರನೆಯದಾಗಿ ಸರ್ಕಾರಿ ಜಾಗ ಪಡೆದು ತಲೆ ಎತ್ತುತ್ತಿರುವ ಖಾಸಗಿ ಆಸ್ಪತ್ರೆಗಳಲ್ಲಿ ದೆಹಲಿಯ ಮಾದರಿಯಲ್ಲಿ ಅನುಪಾತದಂತೆ ಉಚಿತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಿದೆ. ನಾಲ್ಕನೆಯದಾಗಿ ಸರ್ಕಾರದ ನಿಯಮಾವಳಿ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತಾಗಬೇಕಿದೆ. ಇವನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸುಲಿದು ಮುಕ್ಕುತ್ತವೆ. ಸರ್ಕಾರಿ ಆಸ್ಪತ್ರೆಗಳು ಪ್ರಾಣ ತೆಗೆಯುವ ಕಸಾಯಿ ಖಾನೆಗಳಾಗುತ್ತವೆ. ಇದಕ್ಕಾಗಿ ಪ್ರತಿ ವರ್ಷ ಆಸ್ಪತ್ರೆಗಳ ಲೆಕ್ಕತಪಾಸಣೆಗೂ ಮುಂದಾಗಬೇಕು. ಮುಖ್ಯವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕುಡಿಯಲು ಯೋಗ್ಯವಾದ ನೀರು, ಬಳಸಲು ಯೋಗ್ಯವಾದ ಶೌಚಾಲಯಗಳನ್ನು ನಿರ್ಮಿಸಬೇಕು. ವಿಶೇಷವಾಗಿ ಆಸ್ಪತ್ರೆಯ ತ್ಯಾಜ್ಯ ವಿಲೇವಾರಿ ಮಾಡಲು ಸ್ಥಳೀಯ ಪ್ರಾಧಿಕಾರವೊಂದನ್ನು ಅಸ್ತಿತ್ವಕ್ಕೆ ತರಬೇಕಿದೆ.

ಇವೆಲ್ಲವನ್ನು ಗಮನಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೋಗಿ ಕೇಂದ್ರಿತ ಯೋಜನೆಯೊಂದಿಗೆ, ಆರೋಗ್ಯ ಸಂರಕ್ಷಣೆಗೂ ಆದ್ಯತೆ ನೀಡಬೇಕು. ಅತಿ ಸರಳವಾದ ಶುದ್ಧ ಗಾಳಿ, ಬಳಕೆಗೆ ಯೋಗ್ಯವಾದ ನೀರು, ಹಸಿದ ಹೊಟ್ಟೆಗೆ ಅನ್ನ ಒದಗಿಸುವತ್ತ ಕ್ರಮವಹಿಸಬೇಕು. ಅತಿಮುಖ್ಯವಾಗಿ ಕಚ್ಚಾಟ ಇಲ್ಲದ, ಭ್ರಷ್ಟರಹಿತ, ಮಾನವೀಯತೆಯುಳ್ಳ ಉತ್ತಮ ಆಡಳಿತ ನೀಡಬೇಕು. ಆಗ 70ರಿಂದ 80ರಷ್ಟು ಜನ ಆಸ್ಪತ್ರೆ ಮತ್ತು ಔಷಧಿಗಳ ಮೇಲೆ ಅವಲಂಬನೆಯಾಗುವುದನ್ನು ತಪ್ಪಿಸುತ್ತದೆ. ವೈದ್ಯರೆಂದಿಗೂ ಅಧಿಕಾರಿಶಾಹಿಯಂತೆ ನಡೆದುಕೊಳ್ಳಬಾರದು.

ದೇಶಕ್ಕೆ ಸ್ವಾತಂತ್ರ್ಯ ದೊರೆತು 73 ವರ್ಷಗಳಾದರೂ ಜನಸಾಮಾನ್ಯನ ಆರೋಗ್ಯ ಕಾಪಾಡಲಾಗದ ದುಃಸ್ಥಿತಿಯಿಂದ ಹೊರಬರಬೇಕಿದೆ. ಚೀನಾದಂತೆ 10 ದಿನದಲ್ಲಿ 1 ಸಾವಿರ ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ, 15 ದಿನದಲ್ಲಿ 1,300 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡುವ ಶಕ್ತಿಯನ್ನು ಗಳಿಸಿಕೊಳ್ಳಬೇಕಿದೆ. ಈಗಿರುವ ಯೋಜನೆಗಳು ಸಾಧಿಸಿದ ಪ್ರಗತಿ ಇನ್ನೂ ಜನಸಾಮಾನ್ಯ ಜೀವವನ್ನು ಉಚಿತವಾಗಿ ಕಾಪಾಡುವಲ್ಲಿ ವಿಫಲವಾಗಿದೆ.