ಮೇಧಾ ಪಾಟ್ಕರ್ ಸೇರಿ 11 ಜನರ ವಿರುದ್ಧ ಎಫ್ಐಆರ್ ದಾಖಲು…

53
firstsuddi

ಭೋಪಾಲ್ : ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳ ನಿರ್ವಹಣೆಗಾಗಿ ಸಂಗ್ರಹಿಸಿದ ಹಣವನ್ನು ರಾಜಕೀಯ ಹಾಗೂ ದೇಶ ವಿರೋಧಿ ಕಾರ್ಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ಸೇರಿದಂತೆ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ತೆಮ್ಲಾ ಬುಜುರ್ಗ್ ಗ್ರಾಮದ ನಿವಾಸಿ ಪ್ರೀತಮ್ ರಾಜ್ ಬಡೋಲೆ ಎಂಬುವವರ ದೂರಿನ ಮೇರೆಗೆ ಬರ್ವಾನಿ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್ ಐಆರ್ ದಾಖಲಾಗಿದೆ.

ಎಫ್ ಐಆರ್ ನಲ್ಲಿ ಮೇಧಾ ಪಾಟ್ಕರ್, ವಿಜಯ ಚೌಹಾಣ್, ಪರ್ವೀನ್ ರೂಮಿ ಜಹಾಂಗೀರ್, ಕೈಲಾಶ್ ಅವಸ್ಯ, ಮೋಹನ್ ಪಾಟಿದಾರ್, ಆಶಿಶ್ ಮಂಡ್ಲೋಯ್, ಕೇವಲ್ ಸಿಂಗ್ ವಾಸವೆ, ಸಂಜಯ್ ಜೋಶಿ, ಶ್ಯಾಮ್ ಪಾಟೀಲ್, ಸುನೀತ್ ಎಸ್ಆರ್, ನೂರ್ಜಿ ಪದ್ವಿ ಮತ್ತು ಕೇಶವ್ ವಾಸವೆ ಹೆಸರಿದೆ.

ಮುಂಬೈನಲ್ಲಿ ನೋಂದಣಿಯಾಗಿರುವ ನರ್ಮದಾ ನವನಿರ್ಮಾಣ ಅಭಿಯಾನ (ಎನ್ ಎನ್ ಎ) ಟ್ರಸ್ಟ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನರ್ಮದಾ ಕಣಿವೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ವಸತಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಸಂಗ್ರಹಿಸಿದ ಹಣವನ್ನು ರಾಜಕೀಯ, ದೇಶವಿರೋಧಿ ಕಾರ್ಯಸೂಚಿಗೆ ಬಳಸಿಕೊಂಡಿದೆ ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನು ಸುಳ್ಳು ಎಂದು ತಳ್ಳಿ ಹಾಕಿರುವ ಮೇಧಾ ಪಾಟ್ಕರ್, ನನ್ನ ಮೇಲೆ ಈ ಥರ ಆರೋಪ ಬರುತ್ತಿರುವುದು ಇದೇ ಮೊದಲಲ್ಲ. ನನ್ನ ಬಳಿ ಖಾತೆಗಳ ಸಂಪೂರ್ಣ ವಿವರ ಇದೆ. ಎಲ್ಲದಕ್ಕೂ ಉತ್ತರ ನೀಡಲು ಸಿದ್ಧ ಎಂದಿದ್ದಾರೆ.