ಬೆಳಗಾವಿ: ಮೈಸೂರಿನಲ್ಲಿ ಕಾಂಗ್ರೆಸ್ ಸೋತರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂಬ ಹೆದರಿಕೆ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಹಾಗಾಗಿ ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.
ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಸಿದ್ದರಾಮಯ್ಯ ಅವರು ಇದೇ ಮಾತನ್ನು ಹೇಳುತ್ತಿದ್ದಾರೆ. ಇದು ಅವರ ರಾಜಕೀಯ ಗಿಮಿಕ್. ಆದರೆ, ಜನ ಅವರ ಮಾತನ್ನು ನಂಬುವುದಿಲ್ಲ. ಅಲ್ಲದೇ ಈ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲುತ್ತೇವೆ. ಚುನಾವಣೆ ನಂತರದಲ್ಲಿ ಈ ಸರ್ಕಾರ ಪತನವಾಗಬಹುದು ಎಂದು ಭವಿಷ್ಯ ನುಡಿದರು.
ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ, ರಾಜ್ಯದಲ್ಲಿನ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎಂಬ ಚರ್ಚೆಗೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ್, ಅದು ಸುಳ್ಳು. ಬಿಜೆಪಿ ವಿರುದ್ಧ ಕಾಂಗ್ರೆಸ್‌ನವರು ಈ ರೀತಿಯ ಅಪಪ್ರಚಾರ ಮಾಡುತ್ತಲೇ ಇರುತ್ತಾರೆ ಎಂದು ಕಿಡಿಕಾರಿದರು.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸೇರಿಕೊಂಡೇ ಪ್ರಚಾರ ನಡೆಸುತ್ತಿದ್ದೇವೆ. ನಾವು ಪ್ರವಾಸಕ್ಕೆ ಹೋದಲ್ಲಿ ಜೆಡಿಎಸ್ ಮುಖಂಡರು ಬೆಂಬಲ ಕೊಡುತ್ತಿದ್ದಾರೆ. ಇಬ್ಬರೂ ಸೇರಿಕೊಂಡೇ ಬೆಳಗಾವಿ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಈ ಹಿಂದೆ ಜನತಾದಳದಲ್ಲಿದ್ದವರು ಜಾತ್ಯತೀತ ಜನತಾದಳ(ಜೆಡಿಎಸ್) ಕಟ್ಟಿದ್ದರು. ಜೆಡಿಎಸ್ಗೆ ಕಾಂಗ್ರೆಸ್ ವಿರೋಧಿ ನಿಲುವು ಹಿಂದಿನಿಂದಲೂ ಇದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಇದೇ ಮೊದಲೇನಲ್ಲ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಈಗ ಬಿಜೆಪಿಯ ರಾಷ್ಟ್ರೀಯ ನಾಯಕರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದೊಂದು ನ್ಯಾಚುರಲ್ ಅಲಯನ್ಸ್. ಇನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಬಗ್ಗೆ ಪ್ರಧಾನಿ ಮೋದಿ ಅಪಾರ ಗೌರವ ಹೊಂದಿದ್ದಾರೆ. ರಾಜ್ಯಮಟ್ಟದಲ್ಲಿ ಈಗಾಗಲೇ ಬಿಜೆಪಿ–ಜೆಡಿಎಸ್ ಸಮನ್ವಯ ಸಭೆ ನಡೆದಿದೆ. ಈಗ ಜಿಲ್ಲಾಮಟ್ಟದಲ್ಲೂ ಮಾಡಿದ್ದೇವೆ. ಮೋದಿ ಅವರನ್ನು ಮೂರನೇ ಸಲ ಪ್ರಧಾನಿ ಮಾಡಲು ಜೆಡಿಎಸ್ನವರು ಸಹ ಸಹಕರಿಸುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು.










