ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಯುವಕ ಆತ್ಮಹತ್ಯೆ…

129
firstsuddi

ತುಮಕೂರು: ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿ ಹಳ್ಳಿಯಲ್ಲಿ ನಡೆದಿದೆ.

ನಿಖಿಲ್ ಗೌಡ (18) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ನಿಖಿಲ್ ಆಶಾ ಕಾರ್ಯಾಕರ್ತೆಯಾಗಿರುವ ವರಲಕ್ಷ್ಮಮ್ಮ ಎಂಬವರ ಪುತ್ರನಾಗಿದ್ದು, ಪಾವಗಡ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಭಾನುವಾರ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದ ನಿಖಿಲ್ ತಾಯಿಯೊಂದಿಗೆ ನನಗೆ ಅದು ಕೊಡಿಸಿಲ್ಲ, ಇದು ಕೊಡಿಸಿಲ್ಲವೆಂದು ಗಲಾಟೆ ಮಾಡುತ್ತಿದ್ದನಂತೆ. ಗಲಾಟೆ ಬಳಿಕ ತಾಯಿಯ ಬಳಿ ನನಗೆ ಮೊಬೈಲ್ ಚಾರ್ಜರ್ ಕೊಡು ಎಂದಿದ್ದಾನೆ. ಆಗ ತಾಯಿ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿ ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದಾರೆ. ವಾಪಾಸ್ ಮನೆಗೆ ಬಂದು ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್ ಗೌಡ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಘಟನೆ ಬಯಲಿಗೆ ಬಂದಿದೆ.

ಘಟನಾ ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.