ನವದೆಹಲಿ : ಗುಜರಾತ್ ನ ಮೊರ್ಬಿ ತೂಗು ಸೇತುವೆ ಕುಸಿತ ದುರಂತದ ತನಿಖೆಗೆ ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ನವೆಂಬರ್ 14 ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ವಕೀಲ ವಿಶಾಲ್ ತಿವಾರಿ ಈ ಪಿಐಎಲ್ ಸಲ್ಲಿಸಿದ್ದರು. ಸೇತುವೆ ಕುಸಿತದಿಂದಾಗಿ 134ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾಗಿದೆ. ಇದು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ. ಕಳೆದ ಒಂದು ದಶಕದಿಂದ, ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷ ನಿರ್ವಹಣೆ ಚಟುವಟಿಕೆಗಳಿಂದಾಗಿ ನಮ್ಮ ದೇಶದಲ್ಲಿ ಇಂತಹ ಹಲವಾರು ಘಟನೆಗಳು ನಡೆದಿವೆ. ಆದರೆ, ಅಪಾರ ಪ್ರಮಾಣದ ಸಾರ್ವಜನಿಕ ಸಾವುನೋವುಗಳನ್ನು ತಪ್ಪಿಸಬಹುದಾಗಿತ್ತು ಎಂದು ಅರ್ಜಿಯಲ್ಲಿ ತಿವಾರಿ ಹೇಳಿದ್ದಾರೆ.
ಮೊರ್ಬಿಯ ಮಚ್ಚು ನದಿಯ ಮೇಲೆ ಶತಮಾನಕ್ಕೂ ಹೆಚ್ಚು ಹಳೆಯದಾದ ತೂಗು ಸೇತುವೆಯನ್ನು ನವೀಕರಣದ ನಂತರ ಐದು ದಿನಗಳ ಹಿಂದಷ್ಟೇ ಮತ್ತೆ ತೆರೆಯಲಾಗಿತ್ತು. ಜನರಿಂದ ಕಿಕ್ಕಿರಿದಿದ್ದ ಸೇತುವೆ ಭಾನುವಾರ ಸಂಜೆ 6.30ರ ಸುಮಾರಿಗೆ ಕುಸಿದು ಬಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 134ಕ್ಕೂ ಹೆಚ್ಚು ಏರಿಕೆಯಾಗಿದೆ.










