ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿದ ಆರೋಪದಡಿ 8 ಮಂದಿಯನ್ನು ಬಂಧಿಸಲಾಗಿದೆ.
ಎಎಪಿ ಪ್ರಧಾನಿ ವಿರುದ್ಧ ದೇಶಾದ್ಯಂತ ಪೋಸ್ಟರ್ ಅಭಿಯಾನ ಆರಂಭಿಸಿ `ಮೋದಿ ಹಟಾವೋ, ದೇಶ್ ಬಚಾವೋ’ ಅಭಿಯಾನ ಆರಂಭಿಸಿದ ಕೇವಲ ಒಂದು ದಿನದ ನಂತರ ಈ ಬಂಧನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ, ಪ್ರಧಾನ ಮಂತ್ರಿ ಮೋದಿಯನ್ನು ಗುರಿಯಾಗಿಸಿಕೊಂಡು ಸಾವಿರಾರು ಪೋಸ್ಟರ್ ಗಳು ರಾಷ್ಟ್ರ ರಾಜಧಾನಿಯಲ್ಲಿ ಗೋಡೆಗಳ ಮೇಲೆ ಕಾಣಿಸಿಕೊಂಡಿದೆ, ನಂತರ ಈ ಫೋಸ್ಟರ್ ವಿರುದ್ಧ 49 ಎಫ್ಐಆರ್ಗಳನ್ನು ದಾಖಲಿಸಿ ಆರು ಜನರನ್ನು ಬಂಧಿಸಿದ್ದರು. ಬಂಧಿತರಲ್ಲಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಹೊಂದಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕಾರ್ಯಕರ್ತರ ಬಂಧನದ ಕುರಿತು ಪ್ರತಿಕ್ರಿಯಿಸಿ, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರು ತಮ್ಮ ವಿರುದ್ಧ ಪೋಸ್ಟರ್ ಹಾಕುವವರನ್ನು ಬಂಧಿಸಿರಲಿಲ್ಲ ಎಂದು ಕಿಡಿಕಾರಿದ್ದಾರೆ.










