ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳನ್ನು ನಿರೀಕ್ಷಿಸಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತೀಯ ಉದ್ಯಮ ಮತ್ತು ವಾಣಿಜ್ಯ ಮಂಡಳಿ ಮಹಾ ಒಕ್ಕೂಟ (ಎಫ್ಐಸಿಸಿಐ) ಆಯೋಜಿಸಿದ ವಿಕಸಿತ ಭಾರತ 2047 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಕೇಂದ್ರ ಸಚಿವೆ, ಭಾರತ ಮುಂದುವರಿದ ದೇಶವಾಗಲು ಬಹಳ ಅಗತ್ಯ ಇರುವಂತಹ ಭೂಮಿ, ಬಂಡವಾಳ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೊಡ್ಡ ಸುಧಾರಣೆಗೆ ಒತ್ತು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
‘ಮೋದಿ ಸರ್ಕಾರಕ್ಕೆ ಮೂರನೇ ಅವಧಿ ಅಧಿಕಾರ ಸಿಕ್ಕರೆ ಮುಂದಿನ ತಲೆಮಾರಿನ ಸುಧಾರಣೆಗಳನ್ನು ಜಾರಿಗೆ ತರುವುದು ಆದ್ಯತೆ ಆಗಿರುತ್ತದೆ. ಉತ್ಪಾದನೆಗೆ ಪೂರಕವಾಗುವ ಎಲ್ಲಾ ಅಂಶಗಳಲ್ಲೂ ಸುಧಾರಣೆಯ ಪ್ರಭಾವ ಇರುತ್ತದೆ,’ ಎಂದು ಹೇಳಿದ್ದಾರೆ.
ಭೂ ಕಾಯ್ದೆ, ಕಾರ್ಮಿಕ ಕಾಯ್ದೆ, ಬಂಡವಾಳ ಕಾಯ್ದೆಗಳಲ್ಲಿ ಸುಧಾರಣೆಗಳನ್ನು ತರಲಾಗುವ ಸುಳಿವು ನೀಡಿದ್ದಾರೆ. ಜೊತೆಗೆ ನಿರ್ಮಲಾ ಸೀತಾರಾಮನ್ ತಮ್ಮ ಭಾಷಣದಲ್ಲಿ, ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಸುಧಾರಣೆ ಮಾಡಲಾಗುವುದನ್ನೂ ತಿಳಿಸಿದ್ದಾರೆ. ಇದರ ಜೊತೆಗೆ ಕಳೆದ 10 ವರ್ಷಗಳಿಂದ ಕ್ಷೇತ್ರ ನಿರ್ದಿಷ್ಟ ಸುಧಾರಣೆಗಳು ಮತ್ತು ವ್ಯವಸ್ಥೆಯ ಸುಧಾರಣೆಗಳು ಮೂರನೇ ಅವಧಿಯಲ್ಲೂ ಮುಂದುವರಿಯಲಿವೆ ಎಂದಿದ್ದಾರೆ.