ಯಕ್ಷಸಿರಿ ನಾಟ್ಯವೃಂದದಿಂದ ‘ಪಾದುಕಾ ಪ್ರಧಾನ’ ಯಕ್ಷಗಾನ ತಾಳಮದ್ದಲೆ ಪ್ರದರ್ಶನ- ನೋಡುಗರ ಮೆಚ್ಚುಗೆ…

103
firstsuddi

ಚಿಕ್ಕಮಗಳೂರು: ನಗರದ ಜಯನಗರ ಬಡಾವಣೆಯ ಶ್ರೀ ಸಂಕಷ್ಟ ಹರ ಗಣಪತಿ ದೇವಾಲಯದಲ್ಲಿ ಯಕ್ಷಸಿರಿ ನಾಟ್ಯವೃಂದದಿಂದ ಇತ್ತೀಚೆಗೆ ನಡೆದ ‘ಪಾದುಕಾ ಪ್ರಧಾನ’ ಯಕ್ಷಗಾನ ತಾಳಮದ್ದಲೆ ನೋಡುಗರ ಮನ ಗೆದ್ದಿತು.

ತಂದೆಯ ಅಣತಿಯಂತೆ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ವನವಾಸಕ್ಕೆ ತೆರಳುವ ವೇಳೆ ಆತನ ಅನುಜ ಭರತ ಶ್ರೀರಾಮನನ್ನು ತಡೆದು ಅಯೋಧ್ಯೆಗೆ ಹಿಂತಿರುಗಿ ಸಿಂಹಾಸನವನ್ನು ಅಲಂಕರಿಸುವಂತೆ ಮನವೊಲಿಸುತ್ತಾನೆ.

ಶ್ರೀರಾಮ ಯಾವುದೇ ಒತ್ತಾಯಕ್ಕೂ ಮಣಿಯದ ಹಿನ್ನಲೆಯಲ್ಲಿ ಅಂತಿಮವಾಗಿ ತನ್ನ ಅಣ್ಣನ ಪಾದುಕೆಗಳನ್ನು ತಂದು ಅವುಗಳನ್ನು ಸಿಂಹಾಸನದ ಮೇಲಿರಿಸಿ ಅವುಗಳ ಹೆಸರಿನಲ್ಲಿ ರಾಜ್ಯಭಾರ ಮಾಡುವ ಕಥಾ ಹಂದರವನ್ನು ಹೊಂದಿರುವ ತಾಳಮದ್ದಲೆಯಲ್ಲಿ ಕಲಾವಿದರ ಚುರುಕು ಸಂಭಾಷಣೆ, ನವಿರು ಹಾಸ್ಯ ನೋಡುಗರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.
ಮಾತಿನ ಮೇಲಾಟದಲ್ಲಿ ಶ್ರೀರಾಮನಾಗಿ ಪರಮೇಶ್ವರ, ಭರತನಾಗಿ ಅನಿರುದ್ಧ ಎಂ.ಕಾಕತ್ಕರ್, ತಮ್ಮ ಚುರುಕು ಸಂಭಾಷಣೆಯಿಂದ ರಾಮಾಯಣದ ವಿವಿಧ ಮಜಲುಗಳನ್ನು ಸಭಿಕರೆದುರು ಸಮರ್ಥವಾಗಿ ತೆರೆದಿಟ್ಟರು.

ದಶರಥನಾಗಿ ನಾಗರಾಜ ರಾವ್ ಕಲ್ಕಟ್ಟೆ, ಸೀತೆಯಾಗಿ ಶೋಭಾ ಪರಮೇಶ್ವರ, ಲಕ್ಷ್ಮಣನಾಗಿ ಪ್ರತಿಭಾ ನಂದಕುಮಾರ್, ಮಂತ್ರಿ ಸುಮಂತ್ರನಾಗಿ ಸುರೇಶ್‍ಭಟ್, ವಶಿಷ್ಠ ಮಹರ್ಷಿಯಾಗಿ ರೇಖಾ ನಾಗರಾಜ ರಾವ್, ಗುಹನಾಗಿ ಮಹಾಲಕ್ಷ್ಮಿ ಹೆಗಡೆ, ಕೌಸಲ್ಯೆಯಾಗಿ ಕೆ.ಎಚ್.ಗೀತಾ, ಕೈಕೇಯಿಯಾಗಿ ಅಪೂರ್ವ ವೆಂಕಟೇಶ್, ಸುಮಿತ್ರಳಾಗಿ ಪೂರ್ಣಿಮಾ, ಓಲೆಕಾರರಾಗಿ ಹಿಮಗಿರಿ ಮತ್ತು ದಕ್ಷಗಮನ ಸೆಳೆದರು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕಾಕತ್ಕರ್, ಮದ್ದಳೆಯಲ್ಲಿ ವೆಂಕಟೇಶ ದೇವಸ್ಯ, ಚಂಡೆಯಲ್ಲಿ ಅನಿರುದ್ಧ ಎಂ.ಕಾಕತ್ಕರ್ ಭಾಗವಹಿಸಿದ್ದರು. ಅರ್ಚಕ ಗೋವಿಂದಸ್ವಾಮಿ, ಯಕ್ಷಗಾನ ಅಭಿಮಾನಿ ಬಳಗದ ಸಂಚಾಲಕ ಕೆ.ಎನ್. ಮಂಜುನಾಥ ಭಟ್, ಯಕ್ಷಸಿರಿಯ ವೈಷ್ಣವಿ ಎನ್.ರಾವ್, ಕಲಾವಿದ ಕೆ.ಎನ್. ನಾಗಭೂಷಣ್, ಸಾಂಸ್ಕೃತಿಕ ಸಂಘದ ಕೆ.ಎನ್. ಗೋಪಾಲಕೃಷ್ಣ, ವಿನೀತ್‍ಕುಮಾರ್, ಪುಷ್ಪಾರಾಜೇಂದ್ರ, ವಾಸಂತಿ ಪ್ರಭಾಕರ್, ಕಮಲಾಕ್ಷಿ ಉಪಸ್ಥಿತರಿದ್ದರು.