ಗದಗ: ಮೂವರು ಅಭಿಮಾನಿಳು ಸಾವಿನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಮತ್ತೋರ್ವ ಅಭಿಮಾನಿ ಇಂದು ಮೃತಪಟ್ಟಿದ್ದಾರೆ.
ಮೃತನನ್ನು ನಿಖಿಲ್ ಗೌಡ (22) ಎಂದು ಗುರುತಿಸಲಾಗಿದ್ದು, ಈತ ಗದಗದ ಬಿಂಕದಕಟ್ಟಿ ನಿವಾಸಿ. ಈತ ಲಕ್ಷ್ಮೇಶ್ವರ ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ.
ಯಶ್ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಯುವಕ ನಿಖಿಲ್ ಎಂಬಾತನ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ. ಯಶ್ ಹುಟ್ಟಹಬ್ಬದ ದಿನವೇ ನಾಲ್ಕು ಅಭಿಮಾನಿಗಳ ಸಾವಾಗಿದೆ.
ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ನಿಧನರಾಗಿದ್ದು, ಉಳಿದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹೀಗಾಗಿ ಮೃತ ಅಭಿಮಾನಿಗಳ ಮನೆಗೆ ಭೇಟಿ ಕೊಟ್ಟ ಯಶ್, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಭಿಮಾನಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಲು ತೆರಳಿದ್ದರು. ತನ್ನ ನೆಚ್ಚಿನ ನಟ ಯಶ್ ಅವರನ್ನು ನೋಡಬೇಕು ಎಂದು ಹಿಂಬಾಲಿಸುತ್ತಿದ್ದ ನಿಖಿಲ್ ಸ್ಕೂಟಿ ಗದಗ ಮುಳುಗುಂದ ರಸ್ತೆಯಲ್ಲಿ ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಿಖಿಲ್ನನ್ನು ಪೊಲೀಸ್ ವಾಹನದಲ್ಲೇ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಖಿಲ್ ಮೃತಪಟ್ಟಿದ್ದಾರೆ.










