ಬಳ್ಳಾರಿ: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ವೇಳೆ ಬ್ಯಾನರ್ ಕಟ್ಟುವಾಗ ವಿದ್ಯುತ್ ಶಾಕ್ ತಗುಲಿ ಅಭಿಮಾನಿಗಳು ಮೃತಪಟ್ಟ ಘಟನೆ ಮಾಸುವ ಮುನ್ನವೇ, ಯಶ್ ಅಭಿಮಾನಿಯ ಕಾಲು ಮೇಲೆ ಕಾರು ಹಾದು ಮತ್ತೊಂದು ಅವಘಡ ಸಂಭವಿಸಿದೆ.
ಈ ಘಟನೆ ಜಿಲ್ಲೆಯ ಬಾಲಾಜಿ ನಗರದ ಕ್ಯಾಂಪ್ನಲ್ಲಿ ನಡೆದಿದೆ. ನಟ ಯಶ್ ನೋಡಲು ಜಿಲ್ಲೆಯ ಸಿರಗುಪ್ಪ ಪಟ್ಟಣದಿಂದ ಬಂದಿದ್ದ ಯುವಕ ವಸಂತ, ಯಶ್ ನೋಡುವುದಕ್ಕಾಗಿ ಅವರ ಕಾರು ಹಿಂದೆಯೇ ಓಡುವಾಗ ಕಾಲಿನ ಮೇಲೆ ಬೆಂಗಾವಲು ವಾಹನ ಹರಿದು ಕಾಲು ರಕ್ತಸಿಕ್ತವಾಗಿದೆ.
ಬಳ್ಳಾರಿ ಹೊರವಲಯದ ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ನಟ ಯಶ್ ಬಂದಿದ್ದರು. ರಾಕಿಂಗ್ ಸ್ಟಾರ್ ಯಶ್ ಬರುವ ಸುದ್ದಿ ಕೇಳಿಯೇ ಮೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಅಭಿಮಾನಿಗಳು ಬಂದಿದ್ದರು. ಅವರಲ್ಲಿ ಸಿರಗುಪ್ಪದಿಂದ ಬಂದಿದ್ದ ವಸಂತ ಎಂಬ ಯುವಕ. ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ತೆರಳುವ ವೇಳೆ ಯಶ್ ಕಾರನ್ನ ಹಿಂಬಾಲಿಸಿಕೊಂಡು ಓಡಿ ಬಂದಿದ್ದಾನೆ. ಈ ವೇಳೆ ಯಶ್ ಬೆಂಗಾವಲು ವಾಹನವೊಂದು ಅಭಿಮಾನಿಯ ಕಾಲಿನ ಮೇಲೆ ಹರಿದಿದೆ. ಕಾರಿನ ಚಕ್ರ ಹರಿದು ಪಾದ ತೀವ್ರವಾಗಿ ಗಾಯಗೊಂಡು ರಕ್ತ ಸುರಿದಿದೆ. ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.










