ಯುಪಿಎಸ್‍ಸಿ ಫಲಿತಾಂಶ ಪ್ರಕಟ : ಶೃತಿ ಶರ್ಮಾ ಟಾಪರ್.. ಕರ್ನಾಟಕದ 25 ಅಭ್ಯರ್ಥಿಗಳು ಪಾಸ್…

66
firstsuddi

ನವದೆಹಲಿ/ಬೆಂಗಳೂರು : ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್‍ಸಿ) 2021ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದ್ದು, ಈ ವರ್ಷ ಮೊದಲ ನಾಲ್ಕು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ.

ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶ್ರುತಿ ಶರ್ಮಾ ಮೊದಲ ರ‍್ಯಾಂಕ್ ಪಡೆದರೆ ಕ್ರಮವಾಗಿ ಎರಡನೇ ಹಾಗೂ ಮೂರನೇ ರ‍್ಯಾಂಕ್ ನ್ನು ಅಂಕಿತಾ ಅಗರ್ವಾಲ್, ಗಾಮಿನಿ ಸಿಂಗಲ್ ಪಡೆದುಕೊಂಡಿದ್ದಾರೆ. ಇನ್ನೂ ಈ ಬಾರಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಪಾಸ್ ಆಗಿದ್ದು, ಇವರಲ್ಲಿ ಅವಿನಾಶ್ ಬಿ. 31ನೇ ರ‍್ಯಾಂಕ್ ಪಡೆದಿದ್ದಾರೆ.

ಅಂತಿಮ ಪರೀಕ್ಷೆಯಲ್ಲಿ ಪಾಸ್ ಆಗಿರುವ 685 ಅಭ್ಯರ್ಥಿಗಳ ಪೈಕಿ 244 ಸಾಮಾನ್ಯ ವರ್ಗ, 73 ಆರ್ಥಿಕವಾಗಿ ದುರ್ಬಲವಾಗಿರುವ ವರ್ಗ, 203 ಇತರೆ ಹಿಂದುಳಿದ ವರ್ಗ, 105 ಪರಿಶಿಷ್ಟ ಜಾತಿ ಮತ್ತು 60 ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿದ್ದಾರೆಂದು ಆಯೋಗ ತಿಳಿಸಿದೆ.

ಯುಪಿಎಸ್‍ಸಿ ಮುಖ್ಯ ಪರೀಕ್ಷೆಯಲ್ಲಿ ಪಾಸ್ ಆಗಿರುವ ಎಲ್ಲ ಅಭ್ಯರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಸಂಭ್ರಮದಲ್ಲಿರುವ ಭಾರತದ ಅಭಿವೃದ್ಧಿಯ ಪಯಣದಲ್ಲಿ ನಿಮ್ಮ ಆಡಳಿತಾತ್ಮಕ ವೃತ್ತಿ ಆರಂಭಿಸುತ್ತಿದ್ದೀರಿ. ನಿಮಗೆ ನನ್ನ ಶುಭಾಶಯಗಳು ಎಂದಿದ್ದಾರೆ.