ಗಾಂಧಿನಗರ : ಉತ್ತರ ಪ್ರದೇಶದ ಪೊಲೀಸರು ನನ್ನನ್ನು ಕೊಲ್ಲಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಾನು ಜೈಲಿನಿಂದ ಹೊರಬರಲಾರೆ ಎಂದು ಗ್ಯಾಂಗ್ಸ್ಟರ್ನಿಂದ ಬದಲಾಗಿದ್ದ ರಾಜಕಾರಣಿ ಹಾಗೂ ಸಮಾಜವಾದ ಪಾರ್ಟಿಯ ಮಾಜಿ ಸಂಸದ ಅತೀಕ್ ಅಹ್ಮದ್ ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಅತೀಕ್ ಅಹ್ಮದ್ ಅನ್ನು ಅಹಮದಾಬಾದ್ ನ ಸಬರಮತಿ ಕೇಂದ್ರ ಕಾರಾಗೃಹದಿಂದ ಪ್ರಯಾಗ್ರಾಜ್ ಗೆ ಕರೆದೊಯ್ಯಲು ಬಂದಿದ್ದರು. ಈ ವೇಳೆ ಪತ್ರಕರ್ತರು, ನಿಮಗೆ ಜೀವ ಭಯವಿದೆಯೇ ಎಂದು ಕೇಳಿದ್ದಾರೆ. ಅದಕ್ಕೆ ಅತಿಕ್, ಅವರ ಕಾರ್ಯಕ್ರಮ ನನಗೆ ಗೊತ್ತಿದೆ. ನನ್ನನ್ನು ಹತ್ಯೆಗೈಯಲು ಅವರು ಬಯಸಿದ್ದಾರೆ ಎಂದು ಹೇಳಿದ್ದಾರೆ. ಅದಲ್ಲದೇ ಪ್ರಯಾಗ್ ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸುವುದು ಪೊಲೀಸರು ನನ್ನನ್ನು ಹತ್ಯೆಗೈಯಲು ಹುಡುಕಿಕೊಂಡಿರುವ ನೆಪ ಆಗಿದೆ ಎಂದು ತಿಳಿಸಿದ್ದಾರೆ.
ಮಾ.28 ರಂದು ಅಪಹರಣ ಪ್ರಕರಣದ ಆದೇಶ ಹೊರ ಬೀಳಲಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪ್ರಯಾಗ್ರಾಜ್ ಗೆ ಕರೆದೊಯ್ಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತೀಕ್ ಅಹ್ಮದ್ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಮೋಹಿತ್ ಜೈಸ್ವಾಲ್ ಅಪಹರಣ ಮತ್ತು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಫುಲ್ಪುರದ ಮಾಜಿ ಸಂಸದನನ್ನು ಗುಜರಾತ್ ನಲ್ಲಿ ಹೆಚ್ಚಿನ ಭದ್ರತೆಯ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ 2019ರ ಏಪ್ರಿಲ್ ನಲ್ಲಿ ನಿರ್ದೇಶಿಸಿತ್ತು. ಈ ಹಿನ್ನೆಲೆ ಜೂನ್ 2019ರಿಂದ ಅತೀಕ್ ಅಹ್ಮದ್ ನನ್ನು ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಇತ್ತೀಚಿನ ಉಮೇಶ್ ಪಾಲ್ ಕೊಲೆ ಪ್ರಕರಣ ಸೇರಿ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಅತೀಕ್ ಅಹ್ಮದ್ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.










