ಚಿಕ್ಕಮಗಳೂರು : ಯುವಜನತೆ ನೌಕರಿಗಾಗಿ ಕಾಯದೇ ಸ್ವಉದ್ಯೋಗ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ದರಾಜು ಸಲಹೆ ನೀಡಿದರು.
ನೆಹರು ಯುವ ಕೇಂದ್ರ, ಸಿ.ಎಂ.ಎಸ್.ಎಸ್ ಸಂಸ್ಥೆ ಮತ್ತು ಕಾವ್ಯಜ್ಯೋತಿ ಸಂಘ ನಗರದ ಸಂತ ಜೋಸೇಫರ ಪ್ರೌಢಶಾಲೆಯಲ್ಲಿ ಇಂದು ಆಯೋಜಿಸಿದ್ದ ಯುವಕರ ದೃಷ್ಠಿಕೋನ ವಿಷಯ ಕುರಿತ ವಿಚಾರ ಸಂಕಿರಣ ಹಾಗೂ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ನೌಕರಿಗೆ ಸೇರಿದರೆ ಸಂಬಳ ಸೀಮಿತವಾಗಿರುತ್ತದೆ ಆದರೆ ಸ್ವಉದ್ಯೋಗ ಕೈಗೊಂಡರೆ ಅತ್ಯಧಿಕ ಹಣ ಸಂಪಾದಿಸುವುದರ ಜೊತೆಗೆ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಆಸ್ಪತ್ರೆಯ ಕಾರ್ಯಕ್ರಮ ಸಹ ಸಂಯೋಜಕ ವಿ.ಮಹಾಂತೇಶ್ ಪೂಜಾರಿ ಮಾತನಾಡಿ ನಾವು ರೋಗಗಳಿಂದ ಮುಕ್ತರಾಗಿ ಬದುಕಬೇಕಾದರೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಅಭಿಷೇಕ್ ಜಾವರೆ ಮಾತನಾಡಿ ನೆಹರು ಯುವ ಕೇಂದ್ರದಲ್ಲಿರುವ ಸೌಲಭ್ಯಗಳು ಮತ್ತು ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಎಂ.ಎಸ್.ಎಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ವಿಕ್ಟೋರಿಯಾ ಡಿಸೋಜ ಸಾವಯವ ಕೃಷಿ ಮತ್ತು ಕ್ಯಾನ್ಸರ್ ತಡೆಗಟ್ಟುವ ಕುರಿತು ಸಭೆಯಲ್ಲಿ ಪಾಲ್ಗೊಂಡಿದ್ದ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮಾಹಿತಿ ನೀಡಿದರು.
ಸಿ.ಎಂ.ಎಸ್.ಎಸ್ ಸಂಸ್ಥೆಯ ಕೋ ಆರ್ಡಿನೇಟರ್ ರಮ್ಯ, ಕಾವ್ಯಜ್ಯೋತಿ ಮಹಾಸಂಘದ ಸಂಯೋಜಕಿ ಲೈಸಾ ಜಾಯ್, ಶಾಲಿನಿ ಮೇರಿದಾಸ್ ಉಪಸ್ಥಿತರಿದ್ದರು.










