ಯುವತಿ ಕೊಲೆ ಪ್ರಕರಣ : ಆರೋಪಿಯನ್ನು ಬಂಧಿಸಿದ ಪೊಲೀಸರು…

66
firstsuddi

ಪುತ್ತೂರು : ತಾಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಹಾಡಹಗಲೇ ಮನೆಯ ಮುಂಭಾಗದಲ್ಲಿ ಯುವತಿಯನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಳ್ಯ ಕನಕಮಜಲು ನಿವಾಸಿ ಉಮೇಶ್ ಬಂಧಿತ ಆರೋಪಿಯಾಗಿದ್ದು, ಈತನನ್ನು ನಿನ್ನೆ ತಡರಾತ್ರಿ ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಜನವರಿ 17ರಂದು ವ್ಯಕ್ತಿಯೊಬ್ಬ ಮನೆಯಂಗಳದಲ್ಲಿದ್ದ ಕಂಪ ನಿವಾಸಿ ಗಿರಿಜಾ ಎಂಬವರ ಪುತ್ರಿ ಜಯಶ್ರೀ(23)ಯ ಹೊಟ್ಟೆಗೆ ಚೂರಿಯಿಂದ ಚುಚ್ಚಿ ಪರಾರಿಯಾಗಿದ್ದ. ಮಗಳ ಚೀರಾಟ ಕೇಳಿ ಪಕ್ಕದ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ತಾಯಿ ಗಿರಿಜಾ ಓಡಿ ಬಂದಿದ್ದಾರೆ. ಆ ವೇಳೆ ಜಯಶ್ರೀ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾಳೆ.

ಜಯಶ್ರೀ ಹಿಂದೆ ಪ್ರೀತಿಸುತ್ತಿದ್ದ ಕನಕಮಜಲಿನ ಉಮೇಶ್ ಬಗ್ಗೆ ಸಂಶಯ ವ್ಯಕ್ತಪಡಿಸಿ ಮೃತಳ ತಾಯಿ ಗಿರಿಜಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಬಿಎಸ್‍ಸಿ ಪದವೀಧರೆಯಾದ ಜಯಶ್ರೀ ಮತ್ತು ಬಂಧಿತ ಆರೋಪಿ ಉಮೇಶ್ ಇಬ್ಬರು ಸ್ನೇಹಿತರು. ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ ಇತ್ತೀಚೆಗೆ ಜಯಶ್ರೀಗೆ ಉಮೇಶ್ ಗುಣ ಮತ್ತು ನಡತೆ ಬಗ್ಗೆ ಇಷ್ಟವಿರಲಿಲ್ಲ. ಹೀಗಾಗಿ ಕಳೆದ ವರ್ಷ ನವೆಂಬರ್ ನಲ್ಲಿ ಉಮೇಶ್ ನಿಂದ ಜಯಶ್ರೀ ದೂರವಾಗಿದ್ದಳು. ಇದರಿಂದ ಕೋಪಗೊಂಡ ಉಮೇಶ್ ಆಕೆಯನ್ನು ಹತ್ಯೆ ಮಾಡಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.