ಚಿಕ್ಕಮಗಳೂರು : ಯುವ ಜನತೆ ತಮ್ಮ ಭವಿಷ್ಯದ ದೃಷ್ಟಿಯಿಂದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎನ್.ಎಸ್. ಶೃತಿ ಸಲಹೆ ನೀಡಿದರು.
ಶಕ್ತಿ ಮದ್ಯವ್ಯಸನ ಮುಕ್ತಿಕೇಂದ್ರ ವಿವಿಧ ಇಲಾಖೆ ಮತ್ತು ಸಂಸ್ಥೆಗಳ ಸಹ ಯೋಗದೊಂದಿಗೆ ನಗರದ ಎಐಟಿ ಕಾಲೇಜಿನಲ್ಲಿ ನಿನ್ನೆ ಪೊಲೀಸ್ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಮಾದಕ ವಸ್ತು ನಿಯಂತ್ರಣ ಕುರಿತ ತರಬೇತಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಕ ವಸ್ತುಗಳು ಆರಂಭದಲ್ಲಿ ಆಪ್ಯಾಯಮಾನವಾಗಿರುತ್ತವೆ. ಮನಸ್ಸಿಗೆ ಮುದ, ಉತ್ತೇಜನ ನೀಡುತ್ತವೆ ಅದನ್ನೇ ನಿಜವೆಂದು ನಂಬಿ ಅವುಗಳಿಗೆ ದಾಸರಾದರೆ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ಆರ್ಥಿಕವಾಗಿ ಕಂಗೆಡಿಸಿ ನಮ್ಮ ಬದುಕನ್ನು ಪಾತಾಳಕ್ಕೆ ತಳ್ಳುತ್ತವೆ ಎಂದರು.
ಮಾದಕ ವಸ್ತುಗಳ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ಮಾದಕ ವಸ್ತುಗಳ ಸೇವನೆಯಿಂದ ನಮ್ಮ ಕುಟುಂಬದ ಗೌರವ ಬೀದಿ ಪಾಲಾಗುತ್ತದೆ ಎಂದು ಎಚ್ಚರಿಸಿದರು. ಡಿವೈಎಸ್‍ಪಿ ಡಿ.ಟಿ.ಪ್ರಭು ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿದರು.
ಶಕ್ತಿ ಮದ್ಯ ವ್ಯಸನ ಮುಕ್ತಿ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಸಾರ್ವಜನಿಕರು ಮತ್ತು ವಿಶೇಷವಾಗಿ ಯುವಜನತೆಯಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಯೋಗಕ್ಷೇಮಾಧಿಕಾರಿ ಅದಿತಿ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ವಿನಯ್, ರಾಜ್ಯ ಸಮನ್ವಯ ಸಂಸ್ಥೆಯ ಯೋಜನಾ ಸಂಯೋಜಕಿ ಶೈಲಶ್ರೀ ಕಾರ್ಯಾಗಾರದಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು. ಶಕ್ತಿ ಮದ್ಯ ವ್ಯಸನ ಮುಕ್ತಿ ಕೇಂದ್ರದ ಸಿಬ್ಬಂದಿಗಳಾದ ಸೌರಭ, ನವೀನ್‍ಕುಮಾರ್, ಶಶಿಧರ್ ಉಪಸ್ಥಿತರಿದ್ದರು.










