ನವದೆಹಲಿ : ‘ಅಗ್ನಿಪಥ್’ ಯೋಜನೆಯಡಿ ಸೇವೆ ಸಲ್ಲಿಸಿದ ಅಗ್ನಿವೀರರಿಗೆ ರಕ್ಷಣಾ ಸಚಿವಾಲಯದಲ್ಲಿ ಶೇ.10ರಷ್ಟು ಉದ್ಯೋಗಗಳನ್ನು ಮೀಸಲಿಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಕ್ಷಣಾ ಸಚಿವಾಲಯ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಕ್ಷಣಾ ಸಚಿವಾಲಯದ ಖಾಲಿ ಇರುವ ಹುದ್ದೆಗಳಲ್ಲಿ ಶೇ.10ರಷ್ಟು ಉದ್ಯೋಗಗಳನ್ನು ‘ಅಗ್ನಿವೀರರಿಗೆ’ ಮೀಸಲಿಡಲು ಅಗತ್ಯವಾದ ಅರ್ಹತಾ ಮಾನದಂಡಗಳ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದೆ.
ಭಾರತೀಯ ಕೋಸ್ಟ್ ಗಾರ್ಡ್ ನಿಂದ ಡಿಫೆನ್ಸ್ ಸಿವಿಲಿಯನ್ ಪೋಸ್ಟ್ ಗಳಲ್ಲಿ ಅಗ್ನಿವೀರರಿಗೆ ಈ ಮೀಸಲಾತಿಯನ್ನು ನೀಡಲಾಗುವುದು. ಇದಲ್ಲದೆ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿಯೂ ಯುವಕರನ್ನು ನೇಮಿಸಿಕೊಳ್ಳಲಾಗುತ್ತದೆ. ಈ ಮೀಸಲಾತಿಯು ಮಾಜಿ ಸೈನಿಕರಿಗೆ ನೀಡುವ ಮೀಸಲಾತಿಗಿಂತ ಭಿನ್ನವಾಗಿರುತ್ತದೆ ಎಂದು ತಿಳಿಸಿದೆ.
ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಯುವಕರಿಗೆ 4 ವರ್ಷಗಳನ್ನು ಪೂರೈಸಿದ ನಂತರ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನಂತಹ ಪಡೆಗಳಲ್ಲಿ ಶೇ. 10 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ನಿನ್ನೆಯಷ್ಟೇ ಘೋಷಿಸಿತ್ತು. ಅಗ್ನಿವೀರ್ ಗಳು ಈ ಎರಡು ಕೇಂದ್ರೀಯ ಪಡೆಗಳಲ್ಲಿ ನೇಮಕಾತಿಗಾಗಿ ವಯಸ್ಸಿನಲ್ಲಿ ಗರಿಷ್ಠ ಸಡಿಲಿಕೆ ಇರಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.










