ರಮೇಶ್ ಕುಮಾರ್ ಅವರ ವಿರುದ್ಧ ಸುಧಾಕರ್ ಅವರ ಅವಹೇಳನ ಹೇಳಿಕೆ ಸಭಾಧ್ಯಕ್ಷ ಪೀಠಕ್ಕೆ ಹಾಗೂ ಸುಪ್ರೀಂ ಕೋರ್ಟ್ಗೆ ಮಾಡಿದ ಅವಮಾನ : ಸಿದ್ದರಾಮಯ್ಯ.

176
firstsuddi

ಬೆಂಗಳೂರು : ನಿನ್ನೆ ನಡೆದ ವಿಧಾನಸಭಾ ಕಲಾಪದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರ ನಡುವೆ ತೀವ್ರ ವಾಗ್ವಾಧ ನಡೆದಿದ್ದು, ಸುಧಾಕರ್ ಅವರು ರಮೇಶ್ ಕುಮಾರ್ ಅವರಿಗೆ ಏಕವಚನದಲ್ಲಿ ನಿಂದಿಸಿದ್ದರು. ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಸಚಿವ ಸುಧಾಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು ಪಕ್ಷಾಂತರ ಮಾಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 17 ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದರು. ಸಭಾಧ್ಯಕ್ಷರ ಈ ನಿರ್ಣಯವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಸುಪ್ರೀಂ ಕೋರ್ಟ್ ಕೂಡ ಸಭಾಧ್ಯಕ್ಷರ ನಿರ್ಣಯವನ್ನು ಎತ್ತಿಹಿಡಿದಿತ್ತು. ಪಕ್ಷಾಂತರ ಮಾಡಿ ಅನರ್ಹಗೊಂಡವರಲ್ಲಿ ಒಬ್ಬರಾಗಿದ್ದ ಡಾ. ಸುಧಾಕರ್ ಅವರು ಸದನದಲ್ಲಿ ಸಂವಿಧಾನದ ಚರ್ಚೆ ವೇಳೆ ಅಂದಿನ ಸಭಾಧ್ಯಕ್ಷರ ಆದೇಶವನ್ನು ಎಳೆದುತಂದು, ರಮೇಶ್ ಕುಮಾರ್ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ರಮೇಶ್ ಕುಮಾರ್ ಅವರಿಗಷ್ಟೇ ಅಲ್ಲ, ಸಭಾಧ್ಯಕ್ಷ ಪೀಠಕ್ಕೆ ಹಾಗೂ ಸುಪ್ರೀಂ ಕೋರ್ಟ್ಗೆ ಮಾಡಿದ ಅವಮಾನ. ಸುಧಾಕರ್ ಅವರ ಅವಹೇಳನಕಾರಿ ಹೇಳಿಕೆ ವಿರುದ್ಧ ನಿಯಮ 191ರಡಿ ನೋಟಿಸ್ ನೀಡಿ, ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋರಿದ್ದೆ. ಆದರೆ ಬಿಜೆಪಿ ನಾಯಕರು ಇದಕ್ಕೆ ಅವಕಾಶವನ್ನೇ ನೀಡದೆ ದುರ್ವರ್ತನೆ ತೋರಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.