ರಾಖಿ ಕಟ್ಟಲು ಅಣ್ಣ ಬೇಕು ಎಂದ ಮಗಳು- 1 ತಿಂಗಳ ಗಂಡು ಶಿಶುವನ್ನೇ ಕಿಡ್ನಾಪ್ ಮಾಡಿದ ದಂಪತಿ!

73
firstsuddi

ನವದೆಹಲಿ: ರಕ್ಷಾಬಂಧನ ಬಂತು ನನಗೆ ರಾಖಿ ಕಟ್ಟೋಕೆ ಅಣ್ಣನೂ ಇಲ್ಲ, ತಮ್ಮನೂ ಇಲ್ಲ ಎಂದು ಮಗಳು ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಮಗಳ ಆಸೆಯನ್ನು ಈಡೇರಿಸುವ ಸಲುವಾಗಿ ದಂಪತಿ, 1 ತಿಂಗಳ ಗಂಡು ಮಗುವನ್ನು ಕಿಡ್ನಾಪ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.

ಬಂಧಿತರನ್ನು ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದ ನಿವಾಸಿಗಳಾದ ಸಂಜಯ್ ಗುಪ್ತಾ (41) ಮತ್ತು ಅನಿತಾ ಗುಪ್ತಾ (36) ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದೆ ಈ ದಂಪತಿಗಳ ಪುತ್ರ ಸಾವು ಕಂಡಿದ್ದ. ಈ ಬಾರಿ ರಕ್ಷಾಬಂಧನಕ್ಕೆ ರಾಖಿ ಕಟ್ಟಲು ತನಗೆ ಅಣ್ಣ-ತಮ್ಮ ಯಾರೂ ಇಲ್ಲ ಎಂದು ಮಗಳು ಹೇಳಿದ್ದಕ್ಕೆ, ಇವರಿಬ್ಬರೂ ಉತ್ತರ ದೆಹಲಿಯಲ್ಲಿ 30 ದಿನದ ಮಗುವನ್ನು ಕಿಡ್ನಾಪ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 4.34ರ ವೇಳೆಗೆ ಅಂಗವಿಕಲ ಮಹಿಳೆಯೊಬ್ಬರ ಒಂದು ತಿಂಗಳ ಮಗುವನ್ನು ಕಿಡ್ನಾಪ್ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಛಟ್ಟಾ ರೈಲ್ ಚೌಕ್‍ನ ಫುಟ್‍ಪಾತ್‍ನಲ್ಲಿ ವಾಸಿಸುವ ದೂರುದಾರ ದಂಪತಿ, ಮುಂಜಾನೆ ಮೂರು ಗಂಟೆಯ ವೇಳೆಗೆ ತಮಗೆ ಎಚ್ಚರವಾದಾಗ, ಅಪರಿಚಿತ ವ್ಯಕ್ತಿಗಳು ತಮ್ಮ ಮಗುವನ್ನು ಕಿಡ್ನಾಪ್ ಮಾಡಿದ್ದು ಕಾಣಿಸಿತ್ತು ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ತನಿಖೆಯ ವೇಳೆ ಪೊಲೀಸರು ಸಮೀಪದ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಇಬ್ಬರು ಬೈಕ್‍ನಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಬೈಕ್ ಸಂಜಯ್ ಹೆಸರಿನಲ್ಲಿ ನೋಂದಾಯಿಸುರುವುದು ಬೆಳಕಿಗೆ ಬಂದಿದೆ. ಅಂತೆಯೇ ಟ್ಯಾಗೋರ್ ಗಾರ್ಡನ್‍ನ ರಘುಬೀರ್ ನಗರದಲ್ಲಿರುವ ಸಿ-ಬ್ಲಾಕ್‍ನಲ್ಲಿ ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ ಮಗುವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ತಿಳಿಸಿದ್ದಾರೆ.

ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ ಆಗಿರುವ ಸಂಜಯ್ ಈ ಹಿಂದೆ ಮೂರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಹರಣಕ್ಕೊಳಗಾದ ಮಗುವಿನ ತಾಯಿ ಎರಡೂ ಕೈ ಮತ್ತು ಕಾಲುಗಳಿಗೆ ಅಂಗವೈಕಲ್ಯ ಹೊಂದಿದ್ದು, ತಂದೆ ಚಿಂದಿ ಆಯುವವರಾಗಿದ್ದಾರೆ. ದಂಪತಿಗಳು ನಿರಾಶ್ರಿತರಾಗಿದ್ದಾರೆ ಮತ್ತು ಛಟ್ಟಾ ರೈಲ್ ಚೌಕ್ ಬಳಿಯ ಫುಟ್‍ಪಾತ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.