ರಾಜ್ಯೋತ್ಸವ ಮುಗಿಸಿ ಮನೆಗೆ ವಾಪಾಸ್ಸಾಗುವಾಗ ಪಾದಚಾರಿಗಳಿಗೆ ಬೈಕ್ ಡಿಕ್ಕಿ- ಇಬ್ಬರ ಸಾವು…

55
firstsuddi

ಬೆಳಗಾವಿ: ಕನ್ನಡ ರಾಜ್ಯೋತ್ಸವ ಮುಗಿಸಿಕೊಂಡು ಮರಳುತ್ತಿದ್ದ ವೇಳೆ, ಬೈಕ್‌ವೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರು ಧಾರವಾಡ ಜಿಲ್ಲೆಯ ನರೇಂದ್ರದ ಲಬೈಕ್ ಹಲಸಿಗರ ಹಾಗೂ ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ ಎಂದು ಗುರುತಿಸಲಾಗಿದೆ. ಘಟನೆಯಿಂದ ಧಾರವಾಡ ನಗರದ ಅಲ್ತಾಫ್ ನಾಲಬಂದ ಹಾಗೂ ಕಡತನ ಬಾಗೇವಾಡಿಯ ಅರ್ಜುನ ರಂಗಣ್ಣವರ್ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರ ಮೃತದೇಹ ಬಿದ್ದ ಸ್ಥಳದಿಂದ 300 ಮೀಟರ್ ದೂರದಲ್ಲಿ ಬೈಕ್ ಪತ್ತೆಯಾಗಿದೆ. ಇಬ್ಬರು ಯುವಕರು ಬೈಕ್‌ನಲ್ಲಿ ವೇಗವಾಗಿ ಸಂಚರಿಸುತ್ತಿದ್ದರು. ಇದೇ ವೇಳೆ ಹೆದ್ದಾರಿ ಪಕ್ಕದ ಹೋಟೆಲ್‌ನಲ್ಲಿ ಊಟ ಮಾಡಿದ ಇಬ್ಬರು ಯುವಕರು ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ಪಾದಚಾರಿಗಳಿಗೆ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಹಾಗೂ ಓರ್ವ ಪಾದಚಾರಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.