ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾಗವಹಿಸದಿರುವ ಕಾಂಗ್ರೆಸ್ ನಾಯಕರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಸಿದ್ದರಾಮಯ್ಯ.

52
firstsuddi

ಬೆಂಗಳೂರು: ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಅವರ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ, ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ. ಶ್ರದ್ದಾಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹ ಎಂದಿದ್ದಾರೆ.

ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಪ್ರತಿನಿತ್ಯ ಉಪದೇಶ ನೀಡುವ ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರು ಅಪೂರ್ಣಗೊಂಡಿರುವ ಶ್ರೀರಾಮನ ದೇವಸ್ಥಾನವನ್ನು ಉದ್ಘಾಟಿಸಲು ಹೊರಟಿರುವ ಪ್ರಧಾನಿ ನರೇಂದ್ರಮೋದಿ ಅವರ ನಡೆಯ ಬಗ್ಗೆ ಮೌನವಾಗಿರುವುದು ಇವರೆಲ್ಲರ ಪೊಳ್ಳು ಹಿಂದುತ್ವದ ಮುಖವಾಡವನ್ನು ಬಯಲುಗೊಳಿಸಿದೆ.

ರಾಮಜನ್ಮಭೂಮಿ ವಿವಾದ ಶುರುವಾದ ದಿನದಿಂದ ಕಾಂಗ್ರೆಸ್ ಪಕ್ಷ ತನ್ನ ನಿಲುವಿಗೆ ಬದ್ಧವಾಗಿ ಉಳಿದಿದೆ. ನ್ಯಾಯಾಲಯದ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂಬ ನಮ್ಮ ನಿಲುವಿನಂತೆ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೆವು. ಇದರ ಬಗ್ಗೆ ನಮ್ಮಲ್ಲಿ ಯಾವುದೇ ತಕರಾರಿಲ್ಲ. ಮುಸ್ಲಿಂ ಬಾಂಧವರು ಕೂಡಾ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡು ನ್ಯಾಯಾಂಗದ ಮೇಲಿನ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ.

ಆದರೆ ರಾಮಜನ್ಮಭೂಮಿ ವಿವಾದ ಧಾರ್ಮಿಕ ಶ್ರದ್ದೆಯ ಪ್ರಶ್ನೆ, ಅದು ನ್ಯಾಯಾಲಯದಲ್ಲಿ ತೀರ್ಮಾನ ಮಾಡುವಂತಹದ್ದಲ್ಲ ಎಂದು ಹೇಳಿಕೊಂಡು ಬಂದಿದ್ದ ಬಿಜೆಪಿ ಮತ್ತು ಆರ್.ಎಸ್.ಎಸ್, ವಿಶ್ವಹಿಂದೂ ಪರಿಷತ್ ಮೊದಲಾದ ಸಂಘಟನೆಗಳು ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಹೊರಬಿದ್ದ ಕೂಡಲೇ ಅದನ್ನು ಒಪ್ಪಿಕೊಂಡಿರುವುದು ಈ ಸಂಘಟನೆಗಳ ನಾಯಕರ ಹಿಪಾಕ್ರಟಿಕ್ ನಡವಳಿಕೆಗೆ ಸಾಕ್ಷಿ ಎಂದು ಹೇಳಿದ್ದಾರೆ.

ರಾಮಮಂದಿರದಲ್ಲಿ ಶೈವರು-ಶಾಕ್ತರಿಗೆ ಅಧಿಕಾರ ಇಲ್ಲ ಎಂಬ ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿಯವರ ಹೇಳಿಕೆ ವಿವಾದ ಸೃಷ್ಟಿಸಿದೆ. ಇದು ನಿಜವೆಂದಾದರೆ ಇದು ಸಮಸ್ತ ಶೈವ ಆರಾಧಕರಿಗೆ ಮಾಡಿರುವ ಅವಮಾನವಾಗಿದೆ. ಇದೇ ರೀತಿ ರಾಮಮಂದಿರವನ್ನು ರಾಜಕೀಯಕ್ಕಾಗಿ ದುರುಪಯೋಗಗೊಳಿಸುತ್ತಿರುವುದನ್ನು ವಿರೋಧಿಸಿ ನಾಲ್ವರು ಶಂಕರಾಚಾರ್ಯರು ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿರುವುದು ವರದಿಯಾಗಿದೆ. ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಬೇಕಾಗಿದ್ದ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮ ಬಿಜೆಪಿಯ ರಾಜಕೀಯದಿಂದಾಗಿ ಹಿಂದೂಗಳನ್ನು ಒಡೆಯುವ ಕಾರ್ಯಕ್ರಮವಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೇನು ಹತ್ತು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಲಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ತಮ್ಮ ಸಾಧನೆಯನ್ನು ಮತದಾರರ ಮುಂದಿಟ್ಟು ಚುನಾವಣೆಯನ್ನು ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಲೋಕಸಭಾ ಚುನಾವಣೆಯ ಕಾಲದಲ್ಲಿಯೇ ಅವಸರದಿಂದ ಅಪೂರ್ಣ ಸ್ಥಿತಿಯಲ್ಲಿರುವ ರಾಮಮಂದಿರವನ್ನು ಉದ್ಘಾಟಿಸಿ ಈ ಮೂಲಕ ಹಿಂದುತ್ವದ ಅಲೆಯನ್ನು ಬಡಿದೆಬ್ಬಿಸಿ ಅದರ ಮರೆಯಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ ಎಂದು ಸಿಎಂ ಟೀಕಿಸಿದ್ದಾರೆ.