ರಾಹುಲ್ ಗಾಂಧಿಯವರು ನುಡಿದಂತೆ ನಡೆಯುವಂತಹ ನಾಯಕರಾಗಿದ್ದಾರೆ : ಸಿದ್ದರಾಮಯ್ಯ…

189
firstsuddi

ಕೋಲಾರ : ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರು ನುಡಿದಂತೆ ನಡೆಯುವಂತಹ ನಾಯಕರಾಗಿದ್ದಾರೆ. ದೇಶದ ರೈತರು, ಮಹಿಳೆಯರು ಹಾಗೂ ಯುವಕರ ಪಾಲಿಗೆ ಅವರು ಪ್ರಮುಖವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ನರೇಂದ್ರ ಮೋದಿಯವರು ದೇಶದ ಜನರಿಗೆ ಟೋಪಿ ಹಾಕಿದ್ದಾರೆ. ರಫೇಲ್ ಹಗರಣದಲ್ಲಿ 30,000 ಕೋಟಿ ರೂ. ಹಣವನ್ನು ಲೂಟಿ ಹೊಡೆದು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ದೇಶದ ಬಡವರಿಗೆ ವರ್ಷಕ್ಕೆ 72 ಸಾವಿರ ರೂಪಾಯಿಗಳನ್ನು ನೀಡುವ ಐತಿಹಾಸಿಕ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಇದು ಬಡವರಿಗೆ ನೆರವಾಗುವ ಬದ್ಧತೆಯನ್ನು ಹೊಂದಿದೆ. ನರೇಂದ್ರ ಮೋದಿಯವರನ್ನು ದೇಶದ ಜನರು ಈ ದಿನ ಚೋರ್ ಎಂದು ಕರೆಯುತ್ತಿದ್ದಾರೆ. ಮೋದಿಯವರ ಯೋಗ್ಯತೆಯನ್ನು ಸರಿಯಾಗಿ ಹೇಳುತ್ತಿದ್ದಾರೆ. ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋದ ಯಡಿಯೂರಪ್ಪ ಅವರು ಕೂಡಾ ತಮ್ಮನ್ನು ತಾವು ಚೌಕೀದಾರ್ ಎಂದು ಕರೆದುಕೊಳ್ಳುತ್ತಾರೆ. ಜೈಲಿಗೆ ಹೋಗಿ ಬಂದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಕೂಡಾ ಚೌಕೀದಾರ ಎನ್ನುತ್ತಿದ್ದಾರೆ. ಇಂತಹ ರಾಜಕಾರಣಿಗಳನ್ನು ರಾಜ್ಯದ ಜನ ಎಂದೂ ಕಂಡಿಲ್ಲ. ಎತ್ತಿನ ಹೊಳೆ ಯೋಜನೆಗೆ ಈಗಾಗಲೇ 13,000 ಕೋಟಿ ರೂ. ಯೋಜನೆಯನ್ನು ಮಂಜೂರು ಮಾಡಲಾಗಿದೆ. ಕೋಲಾರ ಜಿಲ್ಲೆಗೆ ಎತ್ತಿನ ಹೊಳೆ ಹಾಗೂ ಕೆ.ಸಿ.ವ್ಯಾಲಿ ಯೋಜನೆ ರೂಪಿಸಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಸುಳ್ಳು ಭರವಸೆಯ ಬಿಜೆಪಿ ಅಲ್ಲ ಎಂಬುದನ್ನು ಕೋಲಾರದ ಜನರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.