ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರೋಜ್‌ಗಾರ್ ಮೇಳಕ್ಕೆ ಚಾಲನೆ ನೀಡಿದ್ದಾರೆ. 10 ಲಕ್ಷ ಸಿಬ್ಬಂದಿಯನ್ನು ನೇಮಕಾತಿ ಮಾಡುವ ಅಭಿಯಾನ ಇದಾಗಿದೆ. ಈ ಸಮಾರಂಭದಲ್ಲಿ ಮೊದಲ ಹಂತದಲ್ಲಿ ಹೊಸದಾಗಿ ಸೇರ್ಪಡೆಗೊಂಡ 75 ಸಾವಿರ ಮಂದಿಗೆ ಇಂದು ನೇಮಕಾತಿ ಪತ್ರ ವಿತರಿಸಲಾಗಿದೆ. ಕೇಂದ್ರ ಸರ್ಕಾರವು ಯುವಜನರಿಗೆ ಮಾತು ಕೊಟ್ಟಂತೆ ಈ ಉದ್ಯೋಗ ಮೇಳದ ಮೂಲಕ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ.
ದೇಶಾದ್ಯಂತ ನೇಮಕಗೊಂಡ ಹೊಸ ಅಭ್ಯರ್ಥಿಗಳು ಭಾರತ ಸರ್ಕಾರದ 38 ಸಚಿವಾಲಯ ಅಥವಾ ಇಲಾಖೆಗಳನ್ನು ಸೇರಿಕೊಳ್ಳಲಿದ್ದಾರೆ. ಕೇಂದ್ರ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ, ಅಂಚೆ, ಗೃಹ ಇಲಾಖೆ, ಕಾರ್ಮಿಕ ಇಲಾಖೆ, ಸಿಬಿಐ, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ. ಇಂದು ನೇಮಕಗೊಂಡವರು ಎ, ಬಿ ಮತ್ತು ಸಿ ಹಂತಗಳಲ್ಲಿ ಸರ್ಕಾರಕ್ಕೆ ಸೇರುತ್ತಾರೆ. ನೇಮಕಾತಿಗಳನ್ನು ಮಾಡಲಾಗುತ್ತಿರುವ ಹುದ್ದೆಗಳಲ್ಲಿ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್, ಕಾನ್ಸ್ ಟೇಬಲ್, ಎಲ್ ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್ ಪೆಕ್ಟರ್ ಗಳು ಮತ್ತು ಎಂಟಿಎಸ್ ಕೂಡ ಸೇರಿವೆ.
ರೋಜ್‌ಗಾರ್ ಮೇಳದಲ್ಲಿ ಮಾತನಾಡಿದ ಮೋದಿ, ಆರ್ಥಿಕತೆಯಲ್ಲಿ ಕಳೆದ 7-8 ವರ್ಷಗಳಲ್ಲಿ ನಾವು 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದೇವೆ. ಅಡೆತಡೆಗಳನ್ನು ಸೃಷ್ಟಿಸುತ್ತಿದ್ದ ದೇಶದ ಆರ್ಥಿಕತೆಯ ನ್ಯೂನತೆಗಳನ್ನು ಕಳೆದ ಎಂಟು ವರ್ಷಗಳಲ್ಲಿ ನಾವು ಹೋಗಲಾಡಿಸಿದ್ದರಿಂದ ಇದು ಸಾಧ್ಯವಾಗುತ್ತಿದೆ. ನಾವು ಯುವಜನರ ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇವೆ. ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ದೇಶದ ಉದ್ಯಮಗಳ ಅಗತ್ಯತೆಗಳಿಗೆ ಅನುಗುಣವಾಗಿ ಯುವಜನರಿಗೆ ತರಬೇತಿ ನೀಡುವ ಬೃಹತ್ ಅಭಿಯಾನ ನಡೆಯುತ್ತಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಈಡೇರಿಕೆಗಾಗಿ ನಾವು ಸ್ವಾವಲಂಬಿ ಭಾರತದ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಯುವಜನರಿಗೆ ಗರಿಷ್ಠ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಬಹು ಆಯಾಮಗಳಲ್ಲಿ ಕೂಡ ಕೇಂದ್ರ ಕೆಲಸ ಮಾಡುತ್ತಿದೆ. ಹಲವಾರು ದೊಡ್ಡ ರಾಷ್ಟ್ರಗಳು ಆರ್ಥಿಕ ಸಮಸ್ಯೆ ಎದುರಿಸುವಲ್ಲಿ ಹೆಣಗಾಡುತ್ತಿವೆ. ಹಣದುಬ್ಬರ ಮತ್ತು ನಿರುದ್ಯೋಗದಂತಹ ಸಮಸ್ಯೆಗಳು ಉತ್ತುಂಗದಲ್ಲಿದೆ. ಶತಮಾನಕ್ಕೊಮ್ಮೆ ಬರುವ ಸಾಂಕ್ರಾಮಿಕ ರೋಗದ ಅಡ್ಡ ಪರಿಣಾಮಗಳು 100 ದಿನಗಳಲ್ಲಿ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ನಮ್ಮ ದೇಶದ ಮೇಲಿನ ಇದರ ಪರಿಣಾಮವನ್ನು ಮೃದುಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಇದು ಸವಾಲಿನ ಕೆಲಸ. ಆದರೆ ನಿಮ್ಮ ಆಶೀರ್ವಾದದೊಂದಿಗೆ ನಾವು ಇದುವರೆಗೂ ಅದನ್ನು ಕಾಪಾಡಿದ್ದೇವೆ ಎಂದಿದ್ದಾರೆ.










