ಬೆಳಗಾವಿ : ಮಟಕಾ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಕಾನ್ ಸ್ಟೇಬಲ್ ಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಸಿದ್ಧು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ ಎಸಿಬಿ ಬಲೆಗೆ ಬಿದ್ದ ಕಾನ್ ಸ್ಟೇಬಲ್ ಗಳು. ಕಳೆದ ಶುಕ್ರವಾರ ಕೆಲಸಕ್ಕೆಂದು ಖಾನಾಪುರಕ್ಕೆ ಹೋಗಿದ್ದ ಬೆಳಗಾವಿಯ ಪರಶುರಾಮ ಗಾಡಿವಡ್ಡರ ಮೇಲೆ ಮಟಕಾ ಪ್ರಕರಣ ದಾಖಲಿಸುವುದಾಗಿ ಇಬ್ಬರೂ ಹೆದರಿಸಿದ್ದರು. ಪ್ರಕರಣ ದಾಖಲಿಸದೆ ಇರಲು ರೂ. 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ರೂ.15,000 ಕ್ಕೆ ವ್ಯವಹಾರ ಕುದುರಿಸಿದ್ದರು.
ಈ ಸಂಬಂಧ ಪರಶುರಾಮ ಗಾಡಿವಡ್ಡರ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರೂ ಕಾನ್ ಸ್ಟೇಬಲ್ ಗಳನ್ನು ನಿನ್ನೆ ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.










