ನವದೆಹಲಿ: ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾಗೆ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
2021ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ಹತ್ಯೆಗೈದ ಆರೋಪ ಹೊತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸುಪ್ರೀಂ ಕೋರ್ಟ್ ಎಂಟು ವಾರಗಳ ಅವಧಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜೆ.ಕೆ. ಮಹೇಶ್ವರಿ ಅವರನ್ನೊಳಗೊಂಡ ಪೀಠವು ಮಿಶ್ರಾ ಸಲ್ಲಿಸಿದ ಖಾಯಂ ಜಾಮೀನು ಅರ್ಜಿಯನ್ನು ಬಾಕಿ ಇರಿಸಿ ಮಧ್ಯಂತರ ಜಾಮೀನು ನೀಡಿತು.
ಮಧ್ಯಂತರ ಜಾಮೀನಿನ ಒಂದು ವಾರದೊಳಗೆ ಉತ್ತರ ಪ್ರದೇಶ ರಾಜ್ಯವನ್ನು ತೊರೆಯುವಂತೆ ಕೋರ್ಟ್ ಮಿಶ್ರಾಗೆ ನಿರ್ದೇಶನ ನೀಡಿದೆ ಹಾಗೂ ಮಧ್ಯಂತರ ಜಾಮೀನಿನ ಅವಧಿಯಲ್ಲಿ ಉತ್ತರಪ್ರದೇಶ ರಾಜ್ಯ ಅಥವಾ ದೆಹಲಿ ಎನ್ ಸಿಟಿಯಲ್ಲಿ ಉಳಿಯದಂತೆ ನಿರ್ದೇಶಿಸಿದೆ.
ಅಲ್ಲದೆ ತನ್ನ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕು ಹಾಗೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಮಾತ್ರ ಉತ್ತರಪ್ರದೇಶ ರಾಜ್ಯವನ್ನು ಪ್ರವೇಶಿಸಬಹುದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮಿಶ್ರಾ ಅವರ ಕುಟುಂಬದ ಸದಸ್ಯರು ಮಾಡುವ ಯಾವುದೇ ಪ್ರಯತ್ನವು ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದು ಸುಪ್ರೀಕೋರ್ಟ್ ತಿಳಿಸಿದೆ.










