ಲಾಡ್ಜ್‌ನಲ್ಲಿ ಬಿಎಂಟಿಸಿ ಚಾಲಕ ಶವವಾಗಿ ಪತ್ತೆ – ಕೊಲೆ ಶಂಕೆ…

58
firstsuddi

ಬೆಂಗಳೂರು : ಬಿಎಂಟಿಸಿ ಚಾಲಕ ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ.

ಮೃತ ಬಿಎಂಟಿಸಿ ಚಾಲಕನನ್ನು ಚನ್ನಪಟ್ಟಣ ಮೂಲದ ಪುಟ್ಟೇಗೌಡ (28) ಎಂದು ಗುರುತಿಸಲಾಗಿದೆ. ಕಳೆದ ಆರು ತಿಂಗಳಿನಿಂದ ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟೇಗೌಡ ಅವರು ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುತ್ತೀನಿ ಎಂದು ಮನೆಯ ಸದಸ್ಯರ ಬಳಿ ಹೇಳಿ ಹೊರಟಿದ್ದರು.

ಪುಟ್ಟೇಗೌಡ ಅವರ ಸಾವಿಗೂ ಮೊದಲು ಕೆಂಗೇರಿ ಲಾಡ್ಜ್ ಗೆ ಒಬ್ಬಳು ಯುವತಿಯ ಜೊತೆಗೆ ಬಂದಿದ್ದರು. ಲಾಡ್ಜ್ ನಲ್ಲಿ ಸ್ವಲ್ಪ ಕಾಲ ಇಬ್ಬರೂ ಜೊತೆಗಿದ್ದರು. ಬಳಿಕ ಯುವತಿ ರೂಂನ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೊರ ಹೋಗಿದ್ದಾಳೆ. ಹಣ ಬಾಕಿ ಇರುವ ಹಿನ್ನೆಲೆ ಸಂಜೆ ವೇಳೆಗೆ ಲಾಡ್ಜ್ ನ ಸಿಬ್ಬಂದಿ ರೂಂಗೆ ತೆರಳಿ ಬಾಗಿಲು ಓಪನ್ ಮಾಡಿದಾಗ ಪುಟ್ಟೇಗೌಡ ಸಾವನ್ನಪ್ಪಿರುವ ವಿಚಾರ ತಿಳಿದುಬಂದಿದೆ. ಸದ್ಯ ಮೃತ ಯುವಕನ ಮನೆಯವರು ಆ ಯುವತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ. ಸದ್ಯ ಮೃತ ಪುಟ್ಟೇಗೌಡ ಅವರ ಮೃತದೇಹ ಆರ್ ಆರ್ ಆಸ್ಪತ್ರೆಯಲ್ಲಿದ್ದು, ಇಂದು ಮರಣೋತ್ತರ ಪರೀಕ್ಷೆ ನಡೆದ ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.