ಬೆಳಗಾವಿ : ಸರಕು ಸಾಗಣೆ ಮಾಡುತ್ತಿದ್ದ ಲಾರಿ ಹರಿದು 10 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ವೆಲಕಮ್ ಹೋಟೆಲ್ ಬಳಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ಅಕ್ಕ-ತಮ್ಮ ಹಾಗೂ ಮತ್ತೊಬ್ಬ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಬಾಲಕನ ಮೇಲೆಯೇ ಲಾರಿ ಹರಿದಿದ್ದು, ಬಾಲಕ ಸಾವಿಗೀಡಾಗಿದ್ದಾನೆ. ಅರಹಾನ್ ಬೇಪಾರಿ (10) ಎಂಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತಪಟ್ಟ ಬಾಲಕನ ಸಹೋದರಿ ಅತೀಕಾ ಬೇಪಾರಿ ಹಾಗೂ ಪಾದಚಾರಿ ಆಯುಷ್ ಎಂಬವವರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ನಗರದ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಇದರಿಂದ ರೊಚ್ಚಿಗೆದ್ದ ಜನ ಪೊಲೀಸರ ಎದುರೇ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಲಾರಿ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಸ್ನೇಹಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










