ಲೆಜೆಂಡರಿ ಕಥಕ್ ನೃತ್ಯಗಾರ ಪಂಡಿತ್ ಬಿರ್ಜೂ ಮಹಾರಾಜ್ ಇನ್ನಿಲ್ಲ…

77
firstsuddi

ನವದೆಹಲಿ : ಲೆಜೆಂಡರಿ ಕಥಕ್ ನೃತ್ಯಗಾರ ಪಂಡಿತ್ ಬಿರ್ಜೂ ಮಹಾರಾಜ್(83) ಅವರು ನಿನ್ನೆ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಬಿರ್ಜೂ ಮಹಾರಾಜ್ ಅವರ ಮೂಲ ಹೆಸರು ಬ್ರಿಜ್ ಮೋಹನ್ ನಾಥ್ ಮಿಶ್ರಾ. ಅವರು ಫೆಬ್ರವರಿ 4, 1937 ರಂದು ಪ್ರಸಿದ್ಧ ಕಥಕ್ ನೃತ್ಯ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಅರ್ಚನ್ ಮಹಾರಾಜ್ ಮತ್ತು ಚಿಕ್ಕಪ್ಪಂದಿರಾದ ಶಂಭು ಮತ್ತು ಲಚ್ಚು ಮಹಾರಾಜ್ ಕೂಡ ಕಥಕ್ ನೃತ್ಯಪಟುಗಳೇ ಆಗಿದ್ದರು. ಪಂಡಿತ್ ಬಿರ್ಜೂ ಅವರು ಬಾಲ್ಯದಿಂದಲೇ, ತಮ್ಮ ತಂದೆಯೊಂದಿಗೆ ಸೇರಿ ನೃತ್ಯಪ್ರದರ್ಶನ ನೀಡಲು ಪ್ರಾರಂಭಿಸಿದ್ದರು.

ಬಿರ್ಜು ಮಹಾರಾಜ್ ತಮ್ಮ 13ನೇ ವಯಸ್ಸಿನಲ್ಲಿ ನವದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಪ್ರಕಾರ ಕಲಿಸಲು ಪ್ರಾರಂಭಿಸಿದರು. ನಂತರ ಅವರು ದೆಹಲಿಯ ಭಾರತೀಯ ಕಲಾ ಕೇಂದ್ರದಲ್ಲಿ ಮತ್ತು ಕಥಕ್ ಕೇಂದ್ರದಲ್ಲಿ ಅಧ್ಯಾಪಕರ ಮುಖ್ಯಸ್ಥರಾಗಿದ್ದರು ಮತ್ತು ನಿರ್ದೇಶಕರಾಗಿದ್ದರು. ಬಳಿಕ1998 ರಲ್ಲಿ ಅವರು ನಿವೃತ್ತರಾಗಿದ್ದರು.

ನಿವೃತ್ತಿ ಬಳಿಕ ಅವರು ತಮ್ಮದೇ ನೃತ್ಯ ಶಾಲೆಯನ್ನು ತೆರೆದರು. ಅವರು ಸತ್ಯಜಿತ್ ರಾಯ್ ನಿರ್ದೇಶನದ ಶತರಂಜ್ ಕೆ ಖಿಲಾಡಿ ಎಂಬ ಹಿಂದಿ ಚಲನಚಿತ್ರದ ಎರಡು ನೃತ್ಯ ದೃಶ್ಯಗಳಿಗಾಗಿ ಬಿರ್ಜೂ ಮಹಾರಾಜ್ ಸಂಗೀತ ಸಂಯೋಜಿಸಿ, ಹಾಡನ್ನೂ ಹಾಡಿದರು. ನಂತರ 2002 ರ ಕಾದಂಬರಿ ದೇವದಾಸ್ನ ಚಲನಚಿತ್ರ ಆವೃತ್ತಿಯಿಂದ ಕಾಹೆ ಛೇದ್ ಮೋಹೆ ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು.