ಉದ್ಯಮಿಯಿಂದ ಹಣ ವಸೂಲಿ ಮಾಡಲು ಯತ್ನ – ಇಬ್ಬರು ರೌಡಿಶೀಟರ್​ಗಳ ಬಂಧನ…

144
firstsuddi

ಪುತ್ತೂರು(ದಕ್ಷಿಣ ಕನ್ನಡ) : ಉದ್ಯಮಿಯೊಬ್ಬರಿಗೆ ಹಣದ ಬೇಡಿಕೆ ಇಟ್ಟು, ಬೆದರಿಕೆ ಕರೆ ಮಾಡಿ, ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ ಇಬ್ಬರು ರೌಡಿ ಶೀಟರ್ ಗಳನ್ನು ಸಂಪ್ಯ ಠಾಣಾ ಎಸ್ಐ ಉದಯ ರವಿ ನೇತೃತ್ವದ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರನ್ನು ಬಂಟ್ವಾಳ ಗೋಳ್ತಮಜಲು ನಿವಾಸಿ ಕಲಂದರ್ ಶರೀಫ್ ಶಾಫಿ ಮತ್ತು ಮಂಜನಾಡಿ ನಿವಾಸಿ ಹಸನಬ್ಬಂಹಸನ್ ಅಚ್ಚುಚುನ್ ಎಂದು ಗುರುತಿಸಲಾಗಿದೆ.

ಕಳೆದ ಒಂದು ವಾರದಿಂದ ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್ ಗಳಿಂದ ಕರೆ ಮಾಡಿ, ‘ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ. ಅವನನ್ನು ಬಿಡಿಸಲು ರೂ. 13,00,000/- ತಗಲುತ್ತದೆ. ಅದಕ್ಕಾಗಿ ನೀನು ಹಣ ಕೊಡಬೇಕು, 2 ದಿನದೊಳಗೆ ರೂ. 3,50,000/- ಹಣ ರೆಡಿ ಮಾಡಬೇಕು, ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ. ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ. ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿನ್ನ ಹೆಣ ಖಂಡಿತ ಬೀಳುತ್ತದೆ. ನೀನು ಜೀವಂತ ಬದುಕಲು ಸಾಧ್ಯವಿಲ್ಲ’ ಎಂದು ತಮಗೆ ಜೀವ ಬೆದರಿಕ ಒಡ್ಡಿರುವುದಾಗಿ ಉದ್ಯಮಿ ಅಬೂಬಕ್ಕರ್ ಮುಲಾರ್ ಎಂಬುವವರು ಜ.5ರಂದು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಅ.ಕ್ರ: 03/2022 ಕಲಂ; 504,506,507,387 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಜ.14ರಂದು ಉದ್ಯಮಿಯಿಂದ ಹಣ ಪಡೆದುಕೊಂಡು ಹೋಗುವ ಸಮಯದಲ್ಲಿ ಕ್ಷೀಪ್ರ ಕಾರ್ಯಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಉದ್ಯಮಿಯಿಂದ ವಸೂಲಿ ಮಾಡಿದ ರೂ 50,000/- ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.