ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಜಾಮೀನು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಪ್ರಜ್ವಲ್ ರೇವಣ್ಣ ಅವರ ಪರ ವಾದ ಮಾಡಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಆರೋಪಗಳು ಗಂಭೀರವಾಗಿವೆ. ಆದರೆ ಎರಡು-ಮೂರು ಅಂಶಗಳಿವೆ ಮತ್ತು ದೂರಿನಲ್ಲಿ ಯಾವುದೇ ಸೆಕ್ಷನ್ 376 ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು. ರೋಹಟಗಿ ಅವರು ತಮ್ಮ ಕಕ್ಷಿದಾರರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ಈ ವಿಷಯದಿಂದ ಅವರು ಸೋತರು ಎಂದು ಹೇಳಿದರು. ಈ ಸಂಬಂಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ರೋಹಟಗಿ ತಿಳಿಸಿದರು. ನಾನು ವಿದೇಶದಲ್ಲಿದ್ದೆ. ಮತ್ತೆ ಬಂದು ಶರಣಾದೆ. ಇದೀಗ ಆರೋಪಪಟ್ಟಿ ಸಲ್ಲಿಕೆಯಾಗಿದೆ. ನಾನು ಈ ಹಿಂದೆ ಸಂಸದನಾಗಿದ್ದೆ. ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದೆ. ಇದೆಲ್ಲದರಿಂದ ನಾನು ಸೋತಿದ್ದೇನೆ”, ಎಂದು ಪ್ರಜ್ವಲ್ ಅವರು ತಮ್ಮ ಪರ ವಕೀಲ ರೋಹಟಗಿ ಮೂಲಕ ಕೋರ್ಟ್‍ಗೆ ವಿವರಿಸಿದರು. ಆದರೆ, ಅರ್ಜಿಯನ್ನು ಪುರಸ್ಕರಿಸಲು ಉತ್ಸುಕವಾಗಿಲ್ಲ. ಅರ್ಜಿ “ವಜಾಗೊಳಿಸಲಾಗಿದೆ” ಎಂದು ನ್ಯಾಯಮೂರ್ತಿ ತ್ರಿವೇದಿ ಹೇಳಿದರು. ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಸಂಸದ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.