ಬೆಂಗಳೂರು: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಬೆಳಗಾವಿಯವರೆಗೂ ವಿಸ್ತರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡವರೆಗೆ ಇರುವ ವಂದೇ ಭಾರತ್ ರೈಲು ಸಂಪರ್ಕವನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ವಂದೇ ಭಾರತ್ ರೈಲು ಸಂಪರ್ಕ ವಿಸ್ತರಣೆಯಿಂದ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.
ಬೆಳಗಾವಿ ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಬೆಳಗಾವಿ ಅನೇಕ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ, ಸಕ್ಕರೆ ಕಾರ್ಖಾನೆ, ಆಟೋ ಮೊಬೈಲ್ ಉದ್ದಿಮೆಗೆ ಆಶ್ರಯ ತಾಣವಾಗಿದ್ದು, ಆರ್ಥಿಕವಾಗಿ ಪ್ರಮುಖ ಜಿಲ್ಲೆಯಾಗಿದೆ. ಹೀಗಾಗಿ ವಂದೇ ಭಾರತ್ ರೈಲು ಸಂಪರ್ಕವನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವಂತೆ ಮನವಿ ಮಾಡುತ್ತೇನೆ. ಇದು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.










