ವರುಣನ ಅವಾಂತರ ; ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಎಸ್.ಎಂ.ಕೃಷ್ಣ.

66
firstsuddi

ಬೆಂಗಳೂರು : ನಗರದ ಹಲವೆಡೆ ಮಳೆ ಅವಾಂತರದಿಂದ ನಗರದ ಖ್ಯಾತಿಗೆ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿಗೆ ಇರುವ ಬ್ರ್ಯಾಂಡ್ ಅನ್ನು ಉಳಿಸಿಕೊಳ್ಳುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರು ಪೂರ್ವ ಮಳೆಯಗುತ್ತಿದ್ದು ಇದರಿಂದ ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು ‘ಬ್ರಾಂಡ್ ಬೆಂಗಳೂರು’ ಹೆಸರಿಗೆ ಆತಂಕ ಸೃಷ್ಟಿಸಿದ್ದು, ಭವಿಷ್ಯತ್ತಿನಲ್ಲಿ ಇದರಿಂದ ಕೈಗಾರಿಕೆಗಳ ಸ್ತಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಅದರಿಂದ ಇಲ್ಲಿ ಪ್ರತಿಷ್ಟಾಪನೆಗೊಳ್ಳಬಹುದಾದ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಎಸ್.ಎಂ. ಕೃಷ್ಣ ಅವರು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಪತ್ರದಲ್ಲೇನಿದೆ?
ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿ ವಿಪುಲ ಅವಕಾಶಗಳನ್ನು ನೀಡಿದ್ದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ನಗರ ಬೆಳೆದು ಯುವ ಜನಾಂಗಕ್ಕೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಗರದ ವಿಸ್ತೀರ್ಣ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ನಗರ ಪಾಲಿಕೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗಿ ಬೆಂಗಳೂರಿನ ಸುತ್ತಮುತ್ತಲಿನ ಹಲವು ಬಡಾವಣೆಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಇದರಿಂದ ಬೆಂಗಳೂರಿನ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ರಾಜ್ಯದ ಬಜೆಟ್ ಗಾತ್ರದಲ್ಲಿ ಅರ್ಧದಷ್ಟು ಭಾಗ ಬೆಂಗಳೂರು ನಗರದಿಂದ ಹರಿದು ಬರುವಂತಾಗಿದೆ.

ಭವಿಷ್ಯದ ಬೆಂಗಳೂರು ಹಾಗೂ ರಾಜ್ಯದ ಅಭಿವೃದ್ಧಿ ಗಮನದಲ್ಲಿ ಇಟ್ಟಕೊಂಡು ದೂರಗಾಮಿ ದೃಷ್ಟಿಯಿಂದ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಿ “ಬ್ರ್ಯಾಂಡ್ ಬೆಂಗಳೂರು” ಹೆಸರನ್ನು ಉಳಿಸಿಕೊಳ್ಳಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕವಾಗಿದ್ದು, ಆ ನಿಟ್ಟಿನಲ್ಲಿ ಕೆಲ ಸಲಹೆಗಳನ್ನು ತಮ್ಮ ಅವಗಹನೆಗೆ ತರಬಯಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಲಹೆಗಳೇನು?
1. ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಅಭಿವೃದ್ಧಿಗೆ ರಚಿಸಿದ್ದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನರ್ ರಚಿಸಿ ವಿವಿಧ ವಿಭಾಗಗಳ ತಜ್ಞರನ್ನು ಸೇರಿಸಿ ಅವರ ಸಲಹೆಗಳನ್ನು ಪಡೆದು ದೂರಗಾಮಿ ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸುವುದು.

2. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಿಸಿ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಜ್ಞ ಅಧಿಕಾರಿಗಳ ತಂಡ ರಚಿಸುವುದು ಹಾಗೂ ರಾಜಕಾಲುವೆಗಳ ನಿರ್ವಾಹಣೆಗೆ ಆದ್ಯತೆ ಮೇಲೆ ಕ್ರಮ ವಹಿಸಿ ಮುಂಗಾರು ಮಳೆಯ ಆಗಮನಕ್ಕೂ ಮುನ್ನ ಸಮರೋಪಾದಿಯ ಕಾರ್ಯ ಕೈಗೊಳ್ಳುವುದು.

3. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರು ಮತ್ತು ಹುಬ್ಬಳ್ಳಿಯಂತಹ ನಗರಗಳನ್ನು ಗುರುತಿಸಿ ನೂತನ ಕೈಗಾರಿಕಾ ವಸಹಾತುಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿ ಬೆಂಗಳೂರಿ ನಗರದ ಮೇಲಿನ ಒತ್ತಡ ಕಡಿಮೆ ಮಾಡುವುದು

4. ಬೆಂಗಳೂರು ವ್ಯಾಪ್ತಿಯ ಶಾಸಕರು ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಲಯವಾರು ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳ ಶಾಶ್ವತ ಪರಿಹಾರಕ್ಕೆ ಕಾಲ ಮಿತಿಯಲ್ಲಿ ಕಾರ್ಯಕ್ರಮ ರೂಪಿಸಿ ಅದಕ್ಕೆ ತಕ್ಕ ಅನುದಾನ ಒದಗಿಸುವುದು.

ಈ ಮೇಲ್ಕಂಡ ಅಂಶಗಳ ಜೊತೆಗೆ ರಾಜ್ಯದ ಸರ್ವಪಕ್ಷಗಳ ನಾಯಕರ ಸಲಹೆ ಪಡೆದು ರಾಜ್ಯದ ಅಭಿವೃದ್ಧಿ ಮತ್ತು ಭವಿಷ್ಯದ ಜನಾಂಗದ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಪತ್ರದಲ್ಲಿ ತಿಳಿಸಿದ್ದಾರೆ.